ಆಷಾಡಮಾಸದಲ್ಲಿ ನವದಂಪತಿಗಳು ಏಕೆ ಕೂಡಿರಬಾರದು ? ಆಷಾಢ ಮಾಸ ನಂಬಿಕೆ ಹಿಂದಿದೆ ಈ ಕಾರಣಗಳು
ಈ ಅವಧಿಯಲ್ಲಿ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ, ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ.
ಇದಕ್ಕೆ ನೂರಾರು ಕಾರಣಗಳು ಇವೆ. ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.
ಆಷಾಢ ಮಾಸದಲ್ಲಿ ನವವಧು ಮತ್ತು ಅತ್ತೆ ಒಂದೇ ಬಾಗಿಲಿನಲ್ಲಿ ಹೋಗಬಾರದು ಎಂಬ ನಂಬಿಕೆ ಇದೆ. ಹಾಗಾಗಿ ಈ ಸೊಸೆಯನ್ನು ಆಷಾಢ ಮುಗಿಯುವರೆಗೂ ತವರುಮನೆಗೆ ಕಳುಹಿಸುವ ಸಂಪ್ರದಾಯ ನಮ್ಮಲಿದೆ.
ಆಷಾಢ ಮಾಸದಲ್ಲಿ ಮದುವೆಯಂತ ಶುಭ ಕಾರ್ಯಗಳನ್ನು ನಡೆಸಿದರೆ, ದಂಪತಿಗಳು ಕೂಡಿ ಬಾಳಿದರೆ ಅವರಿಗೆ ಹುಟ್ಟುವ ಸಂತಾನ ಒಂಭತ್ತು ತಿಂಗಳ ಅನಂತರ ಅಂದರೆ ಚೈತ್ರ ಮಾಸದಲ್ಲಿ ಹುಟ್ಟುವ ಸಾಧ್ಯತೆ ಇರುತ್ತದೆ. ಅದು ಬಿರುಬೇಸಗೆಯ ದಿನವಾಗಿರುತ್ತದೆ. ಆ ಅವಧಿಯಲ್ಲಿ ಹೆರಿಗೆಯೂ ಕಷ್ಟ. ಹೀಗಾಗಿ ಆಷಾಢ ಮಾಸವನ್ನು ಅಮಂಗಳಕರವನ್ನಾಗಿ ಮಾಡಲಾಗಿದೆ.
ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಇದಕ್ಕೆ ಸರಿಯಾದ ಕಾರಣ, ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.