ಇನ್ನು ಮುಂದೆ ನೀವೂ ಕೂಡ ಶಿಕ್ಷಣ ಇಲಾಖೆಯ ದೂರುಗಳನ್ನು ಸಚಿವರ ಬಳಿಯೇ ಹೇಳಬಹುದು !! | ಹೇಗೆ ಅಂತಿರಾ !?? ಇಲ್ಲಿದೆ ಮಾಹಿತಿ
ಇನ್ನು ಮುಂದೆ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು, ದೂರುಗಳನ್ನು ಯಾರು ಬೇಕಾದರೂ ನೇರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ತಿಳಿಸಬಹುದು. ಅದಲ್ಲದೆ ಪೋಷಕರು, ಸಾರ್ವಜನಿಕರು ನೀಡುವ ದೂರುಗಳಿಗೆ ಖುದ್ದು ಶಿಕ್ಷಣ ಸಚಿವರೇ ಉತ್ತರ ಕೊಡುವ ಕೆಲಸ ಕೂಡ ಮಾಡ್ತಾರೆ.
ಹೌದು. ಸಾರ್ವಜನಿಕರ ಸಮಸ್ಯೆ ಆಲಿಸಲು, ದೂರು ಸ್ವೀಕಾರ ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಶಾಲಾ ಶಿಕ್ಷಣ ಇಲಾಖೆಗೆ ನೂತನವಾಗಿ ವೆಬ್‌ಸೈಟ್ ಪ್ರಾರಂಭ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ವೆಬ್‌ಸೈಟ್ ಕೆಲಸ ನಡೆಯುತ್ತಿದ್ದು, ಶೀಘ್ರವೇ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ.
ನೂತನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ದೂರು ನೀಡಲು ವಿಶೇಷ ಪೇಜ್ ಪ್ರಾರಂಭ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರನ್ನು ನೇರವಾಗಿ ಸಾರ್ವಜನಿಕರು ಇಲ್ಲಿಗೆ ಸಲ್ಲಿಸಬಹುದು. ಈ ದೂರನ್ನು ಖುದ್ದು ಶಿಕ್ಷಣ ಸಚಿವರೇ ನೋಡ್ತಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡ್ತಾರೆ. ಅಷ್ಟೇ ಅಲ್ಲ ಸಮಸ್ಯೆ ಪರಿಹಾರಕ್ಕೆ ಟೀಂ ರಚನೆ ಮಾಡಲಿದ್ದು, ದೂರು ಇತ್ಯರ್ಥ ಆಗೋವರೆಗೂ ಈ ಟೀಂ ಕೆಲಸ ಮಾಡಲಿದೆ. ದೂರು ಪರಿಹಾರ ಆದ ಮೇಲೆ ಸಚಿವರ ಗಮನಕ್ಕೆ ಈ ಟೀಂ ತರಲಿದೆ.
ಇಷ್ಟೇ ಅಲ್ಲ, ಶಾಲಾ ಶಿಕ್ಷಣ ಇಲಾಖೆ ನೂತನವಾಗಿ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭ ಮಾಡ್ತಿದೆ. ಟ್ವಿಟರ್, ಫೇಸ್‌ಬುಕ್, ಕೂ ಆ್ಯಪ್‌ನಲ್ಲೂ ಶಿಕ್ಷಣ ಇಲಾಖೆ ಮಾಹಿತಿಗಳು ಇನ್ನು ಮುಂದೆ ಲಭ್ಯವಾಗಲಿವೆ. ಇಲಾಖೆಯ ಆದೇಶಗಳು, ಕಾರ್ಯಕ್ರಮಗಳು, ಮಾಹಿತಿಗಳು ಈ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಮುಂದೆ ಲಭ್ಯವಾಗಲಿವೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಸಿದ್ದತೆ ಕಾರ್ಯ ನಡೆದಿದ್ದು, ಶೀಘ್ರವೇ ಸಾಮಾಜಿಕ ಜಾಲತಾಣಗಳು ಲೋಕಾರ್ಪಣೆ ಆಗಲಿವೆ.