ಸದ್ಯದಲ್ಲೇ ಬಂದ್ ಆಗುತ್ತಾ ಶಿರಾಡಿಘಾಟ್ !??

ಸದ್ಯದಲ್ಲೇ ಶಿರಾಡಿ ಘಾಟ್ ಆಗುವ ಸಾಧ್ಯತೆ ಇದೆ. ಹೆದ್ದಾರಿ ಕಾಮಗಾರಿ ನಡೆಸುವ ಸಲುವಾಗಿ ಶಿರಾಡಿ ರಸ್ತೆಯನ್ನು ಸುಮಾರು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ದೋಣಿಗಾಲ್ ನಿಂದ ಮಾರನಹಳ್ಳಿವರೆಗೆ ಸುಮಾರು 14 ಕಿಲೋಮೀಟರ್ ದೂರ ಶಿರಾಡಿ ಹೆದ್ದಾರಿ ಬಂದ್ ಮಾಡಿ ಕಾಮಗಾರಿ ನಡೆಸಲು ಗುತ್ತಿಗೆದಾರರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

 

ಬೆಂಗಳೂರಿನಿಂದ ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೋಗಲು ಶಿರಾಡಿಘಾಟ್ ರಸ್ತೆಯೇ ಮುಖ್ಯ ರಸ್ತೆಯಾಗಿದೆ. ಅಷ್ಟೇ ಅಲ್ಲದೆ ಚೆನ್ನೈ ಟು ಮಂಗಳೂರು ಬಂದರಿಗೆ ಕೂಡ ಇದೇ ಶಿರಾಡಿಘಾಟ್ ಮೂಲಕ ಹೋಗಬೇಕು. ಆದರೆ ಶಿರಾಡಿಘಾಟ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಸುಮಾರು ನಾಲ್ಕು ತಿಂಗಳುಕಾಲ ಶಿರಾಡಿಘಾಟ್ ಬಂದ್ ಮಾಡಬೇಕಾಗುತ್ತದೆ.

ಒಂದು ವೇಳೆ ಶಿರಾಡಿಘಾಟ್ ಬಂದ್ ಆದರೆ ಬದಲಿ ಮಾರ್ಗದ ಮೊರೆ ಹೋಗಬೇಕಾಗುತ್ತದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ, ಮಂಗಳೂರು ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು ಈ ಹಿಂದೆಯೂ ಚರ್ಚೆ ನಡೆಸಿದ್ದರು. ಆ ವೇಳೆ ಸ್ಥಳೀಯರು ಶಿರಾಡಿಘಾಟ್ ರಸ್ತೆ ಬಂದ್‍ಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಹೀಗಾಗಿ ಶಿರಾಡಿಘಾಟ್ ರಸ್ತೆ ಬಂದ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಹಾಸನದಿಂದ ಸಕಲೇಶಪುರದವರೆಗಿನ ಹೆದ್ದಾರಿ ಕಾಮಗಾರಿ ಕಳೆದ 6 ವರ್ಷದಿಂದ ಕುಂಟುತ್ತಾ ಸಾಗುತ್ತಿದ್ದು, ಇನ್ನೂ ಕೂಡ ಪೂರ್ತಿಯಾಗಿಲ್ಲ. ಅದೇ ರೀತಿ ಶಿರಾಡಿಘಾಟ್ ರಸ್ತೆ ಕಾಮಗಾರಿ ಕೂಡ ವಿಳಂಬವಾದರೆ, ಪ್ರತಿನಿತ್ಯ ಸಂಚರಿಸುವ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂದು ಶಿರಾಡಿ ರಸ್ತೆ ಬಂದ್‍ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೆ ಶಿರಾಡಿಘಾಟ್ ರಸ್ತೆ ಬಂದ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸಕಲೇಶಪುರ ಹೆಚ್ಚು ಮಳೆಯಾಗುವ ಭಾಗವಾಗಿದ್ದು, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ರೆ ಹೇಗೆ ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಜನರಲ್ಲಿ ಮೂಡಿದೆ.

Leave A Reply

Your email address will not be published.