ಇದೇ ವರ್ಷಾಂತ್ಯದೊಳಗೆ ಚಾಲ್ತಿಗೆ ಬರಲಿದೆ ಇ-ಪಾಸ್‌ಪೋರ್ಟ್ !! | ಹೇಗಿರಲಿದೆ ?? ಕೆಲಸ ಹೇಗೆ ?? ಇಲ್ಲಿದೆ ಮಾಹಿತಿ

Share the Article

ವಿದೇಶ ಪ್ರವಾಸ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಲು ಹಾಗೂ ಪ್ರಯಾಣಿಕರ ಡೇಟಾವನ್ನು ಸುರಕ್ಷಿತವಾಗಿಡಲು ಭಾರತ ಸರ್ಕಾರ ಶೀಘ್ರವೇ ಇ-ಪಾಸ್‌ಪೋರ್ಟ್‌ಗಳನ್ನು ಪ್ರಾರಂಭಿಸುವಲ್ಲಿ ಕೆಲಸ ಮಾಡುತ್ತಿದೆ.

ಸರ್ಕಾರ ಕಳೆದ ವರ್ಷ ಇ-ಪಾಸ್‌ಪೋರ್ಟ್ ಪರಿಕಲ್ಪನೆಯನ್ನು ಪರಿಚಯಿಸಿ, ಶೀಘ್ರವೇ ಅದನ್ನು ಪ್ರಾರಂಭಿಸುವುದಗಿ ತಿಳಿಸಿತ್ತು. ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವರ್ಷದ ಅಂತ್ಯದಲ್ಲಿ ಇ-ಪಾಸ್‌ಪೋರ್ಟ್ ಹೊರಬರಲಿದೆ ಎಂದು ತಿಳಿಸಿದ್ದಾರೆ. ಇದು ನಾಗರಿಕರ ಅನುಭವ ಹಾಗೂ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಹೊಸ ಪರಿಕಲ್ಪನೆಯಲ್ಲ. 100ಕ್ಕೂ ಹೆಚ್ಚು ದೇಶಗಳು ಈಗಾಗಲೇ ಇ-ಪಾಸ್‌ಪೋರ್ಟ್‌ಗಳನ್ನು ನೀಡುತ್ತಿವೆ. ಐರ್ಲೆಂಡ್, ಜಿಂಬಾಬ್ವೆ, ಮಲಾವಿ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳು ಪಾಸ್‌ಪೋರ್ಟ್‌ಗಳನ್ನು ಹೊರತಂದಿವೆ ಎಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನೀಡಿದ ಅಂಕಿಅಂಶಗಳು ತಿಳಿಸಿವೆ.

ಹಾಗಿದ್ದರೆ, ಇ-ಪಾಸ್‌ಪೋರ್ಟ್ ಏನು? ಅದು ಪ್ರಯಾಣವನ್ನು ಹೇಗೆ ಸುಲಭ ಹಾಗೂ ಸುರಕ್ಷಿತಗೊಳಿಸುತ್ತದೆ? ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಕುರಿತು ಮಾಹಿತಿ ಇಲ್ಲಿದೆ.

ಪಾಸ್‌ಪೋರ್ಟ್ ಎಂದರೇನು?

ಇ-ಪಾಸ್‌ಪೋರ್ಟ್‌ಗಳು ಸಾಮಾನ್ಯ ಭೌತಿಕ ಪಾಸ್‌ಪೋರ್ಟ್‌ಗಳಂತೆಯೇ ಕೆಲಸ ಮಾಡುತ್ತದೆ. ಅದರಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೋಲುವ ಸಣ್ಣ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಬಳಸುವ ಚಿಪ್ ವ್ಯಕ್ತಿಯ ಎಲ್ಲಾ ನಿರ್ಣಾಯಕ ವಿವರಗಳನ್ನು ಸಂಗ್ರಹಿಸುತ್ತದೆ. ಅದರಲ್ಲಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಹಾಗೂ ಇತರ ವಿಷಯಗಳು ಇರುತ್ತದೆ.

ಇ-ಪಾಸ್‌ಪೋರ್ಟ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್(ಆರೆಫ್‌ಐಡಿ) ಚಿಪ್ ಇರಲಿದ್ದು, ಹಿಂಬದಿಯ ಕವರ್‌ನಲ್ಲಿ ಎಂಬೆಡ್ ಮಾಡಲಾದ ಆಂಟೆನಾ ಇರಲಿದೆ. ಈ ಚಿಪ್ ಅಧಿಕಾರಿಗಳಿಗೆ ಪ್ರಯಾಣಿಕರ ವಿವರಗಳನ್ನು ತಕ್ಷಣವೇ ಪರಿಶೀಲಿಸಲು ಸಹಾಯ ಮಾಡುತ್ತದೆ. ಇ-ಪಾಸ್‌ಪೋರ್ಟ್ ಬಳಕೆಗೆ ತರುವ ಹಿಂದಿನ ಉದ್ದೇಶವೆಂದರೆ, ನಕಲಿ ಪಾಸ್‌ಪೋರ್ಟ್‌ಗಳ ಚಲಾವಣೆಯನ್ನು ಕಡಿಮೆ ಮಾಡುವುದು ಹಾಗೂ ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ.

ಹಳೆ ಪಾಸ್‌ಪೋರ್ಟ್ ನವೀಕರಣ:

ಪ್ರಸ್ತುತ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರು ಇ-ಪಾಸ್‌ಪೋರ್ಟ್‌ಗೆ ಅಪ್‌ಗ್ರೇಡ್ ಮಾಡಬೇಕೇ ಅಥವಾ ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಅವಧಿ ಮುಗಿಯುವವರೆಗೆ ಕಾಯಬೇಕೇ ಎಂದು ಸರ್ಕಾರ ಘೋಷಿಸಿಲ್ಲ. ಇ-ಪಾಸ್‌ಪೋರ್ಟ್‌ನ ಅರ್ಜಿ ಪ್ರಕ್ರಿಯೆ ಭೌತಿಕ ಪಾಸ್‌ಪೋರ್ಟ್‌ನಂತೆಯೇ ಇರುತ್ತದೆ ಎಂಬ ನಿರೀಕ್ಷೆಯಿದೆ. ಈ ಸೇವೆ ಅಧಿಕೃತವಾಗಿ ದೇಶದಲ್ಲಿ ಲಭ್ಯವಾದ ಬಳಿಕ ಹೊಸ ಅರ್ಜಿದಾರರು ತಕ್ಷಣವೇ ಇ-ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ.

ತಯಾರಿಕೆ ಎಲ್ಲಿ?

ಟೆಕ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಇ-ಪಾಸ್‌ಪೋರ್ಟ್‌ಗಳನ್ನು ನಿರ್ಮಿಸುವಲ್ಲಿ ಕೆಲಸ ಮಾಡುತ್ತಿದೆ. ಭಾರತ ಸರ್ಕಾರ ಈಗಾಗಲೇ ದೃಢಪಡಿಸಿದಂತೆ ಈ ವರ್ಷದ ಅಂತ್ಯದ ವೇಳೆಗೆ ಸೇವೆಯನ್ನು ಹೊರತರಲಿದೆ. ವರದಿಗಳ ಪ್ರಕಾರ, ಟಿಸಿಎಸ್ ಹೊಸ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಹಾಗೂ ಯೋಜನೆಯ ಎಲ್ಲಾ ಅವಶ್ಯಕತೆಗಳಿಗೆ ಸಹಾಯವಾಗಲು ಹೊಸ ಡೇಟಾ ಸೆಂಟರ್ ಅನ್ನು ಸ್ಥಾಪಿಸಲಿದೆ ಎಂದು ಹೇಳಲಾಗುತ್ತಿದೆ.

ಹೇಗೆ ಕಾಣಿಸಲಿದೆ?

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆಯೇ ಕಾಣಿಸಲಿದೆ. ಆದರೆ ಹೆಚ್ಚುವರಿಯಾಗಿ ಅದರಲ್ಲಿ ಚಿಪ್ ಅನ್ನು ಅಳವಡಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭ ಭೌತಿಕ ಪಾಸ್‌ಪೋರ್ಟ್ ಒಯ್ಯಬೇಕಾಗುತ್ತದೆ.

Leave A Reply