ಉಡುಪಿ: ನೇಜಿಗೆ ತೆರಳಿದ್ದವರಿಗೆ ಮುಗುಡು ಮೀನಿನ ಪರ್ಬ!! ಗದ್ದೆಯಲ್ಲೇ ಬೃಹತ್ ಆಕಾರದ ಮೀನುಗಳ ಹಿಡಿದವರ ಮೊಗದಲ್ಲಿ ಸಂತಸ
ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆರಾಯ ಎಡೆಬಿಡದೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗವು ನಾಟಿ ಮಾಡಲು ಗದ್ದೆಗೆ ಇಳಿದಿದ್ದು, ಈ ನಡುವೆ ಕಟಪಾಡಿ ಸಮೀಪದ ಭತ್ತದ ಗದ್ದೆಯೊಂದರಲ್ಲಿ ನೇಜಿ ನಾಟಿಗೆ ಇಳಿದವರಿಗೆ ಭರ್ಜರಿ ಮೀನು ಸಿಕ್ಕಿದೆ.
ಕಟಪಾಡಿ ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಎಂಬವರ ಗದ್ದೆಯಲ್ಲಿ ಮೀನುಗಳ ರಾಶಿ ಕಂಡುಬಂದಿದ್ದು, ಬೃಹತ್ ಗಾತ್ರದ ಮುಗುಡು ಜಾತಿಗೆ ಸೇರಿದ ಮೀನುಗಳನ್ನು ಕಂಡು ಮೀನು ಪ್ರಿಯರ ಮೊಗದಲ್ಲಿ ಸಂತಸ ಅರಳಿದ್ದಲ್ಲದೆ, ನಾ ಮುಂದು ತಾ ಮುಂದು ಎನ್ನುತ್ತಾ ಮಕ್ಕಳ ಸಹಿತ ಹಿರಿಯರು, ಮಹಿಳೆಯರು ಮೀನು ಹಿಡಿಯುವುದರಲ್ಲಿ ಮಗ್ನರಾಗಿದ್ದುದು ಕಂಡು ಬಂತು.
ಈ ಮೀನುಗಳು ಹೆಚ್ಚು ಬೆಲೆ ಬಾಳುವ ಮೀನುಗಳಾಗಿದ್ದು, ಒಂದೊಂದು ಮೀನು ಬರೋಬ್ಬರಿ 10ಕೆಜಿ ಗಿಂತಲೂ ಅಧಿಕ ತೂಗುತ್ತಿತ್ತು ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಸುಮಾರು ಸಾವಿರ ಮೊತ್ತ ಬೆಲೆ ಬಾಳುತ್ತವೆ ಎನ್ನುತ್ತಾರೆ ಅಲ್ಲಿನ ಮೀನು ಪ್ರಿಯರು.