ಈ ಪೊಲೀಸ್ ಠಾಣೆಯಲ್ಲಿ ಸಾಕುತ್ತಾರಂತೆ ಬೆಕ್ಕು, ಕಾರಣ?
ಇಲಿಗಳ ಕಾಟ ಯಾರಿಗಾದೀತು. ಅದರಲ್ಲೂ ಕಚೇರಿಗಳಲ್ಲಿ ಇವುಗಳ ಕಾಟದಿಂದ ತೊಂದರೆ ಹೆಚ್ಚು ಎಂದೇ ಹೇಳಬಹುದು. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮೂಷಿಕಗಳ ಕಾಟದಿಂದ ಹೈರಾಣಾದ ಪೊಲೀಸರು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಪೊಲೀಸ್ ಠಾಣೆಯಲ್ಲಿನ ದಾಖಲೆಗಳನ್ನು ತಿಂದು ತೇಗಿ ಹಾಳು ಮಾಡುತ್ತಿವೆ. ಇದರಿಂದ ಇಲಿಗಳ ಕಾಟಕ್ಕೆ ಹೈರಾಣಾದ ಪೊಲೀಸರು ಈಗ ಬೆಕ್ಕೊಂದನ್ನು ಸಾಕುತ್ತಿದ್ದಾರೆ. ಈ ಮೂಲಕ ಇಲಿಗಳನ್ನು ಮಟ್ಟಹಾಕಲು ಮುಂದಾಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆ ರಾಜಾರೋಷವಾಗಿ ಓಡಾಡುತ್ತಿರುವ ಬೆಕ್ಕು ಇಲಿಗಳ ಬೇಟೆ ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗ್ತಿದ್ದು, ಪೊಲೀಸರ ಪ್ಲಾನ್ ಸಕ್ಸಸ್ ಆಗಿದೆ. ಪೊಲೀಸರು ಕಳೆದ 1 ತಿಂಗಳ ಹಿಂದೆ ಬೆಕ್ಕಿನ ಮರಿ ಒಂದನ್ನು ತಂದು ಸಾಕಲು ಪ್ರಾರಂಭಿಸಿದರು. ಇದೀಗ ಈ ಬೆಕ್ಕಿನ ಮರಿ ದೊಡ್ಡದಾಗಿದ್ದು ಇಲಿಗಳ ಬೇಟೆ ಶುರು ಮಾಡಿದೆ. ಈ ಮೂಲಕ ಪೊಲೀಸರ ತಲೆನೋವು ದೂರ ಆಗಿದೆ. ಇಲಿಗಳ ಕಾಟಕ್ಕೆ ಬೇಸತ್ತು ಹೋಗಿದ್ದ ಪೊಲೀಸರಿಗೆ ಬೆಕ್ಕು ರಿಲೀಫ್ ಕೊಡುತ್ತಿದೆ.