ಪದೇ ಪದೇ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ ಪ್ರಿಯಕರ | ಕಾಟ ತಾಳಲಾಗದೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು !!
ಪದೇ ಪದೇ ಫೋಟೋ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನ ಕಾಟ ತಾಳಲಾರದೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಜ್ಜತ್ ನಜರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬ್ಯಾಂಕ್ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದೆ.
ಪ್ರತಿದಿನ ಇಬ್ಬರೂ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪ್ರೇಮಿಯು ವಾಟ್ಸಾಪ್‌ನಲ್ಲಿ ಹುಡುಗಿಯ ಫೋಟೋ ಕಳಿಸುವಂತೆ ಕೇಳಿದ್ದಾನೆ. ಪದೇ ಪದೇ ಒತ್ತಾಯಿಸಿದ್ದಾನೆ. ಆದರೂ ಆಕೆ ಫೋಟೋ ಕಳುಹಿಸಲು ನಿರಾಕರಿಸಿದ್ದಾಳೆ. ನಂತರ ವೀಡಿಯೋ ಕಾಲ್‌ನಲ್ಲಿ ಮಾತನಾಡುವುದಕ್ಕೂ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾನೆ. ಆಗ ಫೋನ್ ಕರೆ ಕಟ್ ಮಾಡಿದ್ದ ಗೆಳತಿ ಮತ್ತೆ ಅವನಿಗೆ ನಿರಂತರವಾಗಿ ಕರೆ ಮಾಡಿದ್ದಾಳೆ. ಸುಮಾರು 40 ಬಾರಿ ಕರೆ ಮಾಡಿದರೂ ಪ್ರೇಮಿ ತೆಗೆಯದಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತನ್ನ ಪ್ರೇಮಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಭಾವಿಸಿ ತಾನೂ ವಿಷ ಸೇವಿಸಿದ್ದಾಳೆ. ಕೆಲ ಸಮಯ ಕಳೆದ ಬಳಿಕ ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಇದೇ ವೇಳೆ `ನಿನಗೇನಾದರೂ ಆಯಿತೆಂದರೆ ನಿನ್ನ ಕುಟುಂಬದವರನ್ನು ಸಾಯಿಸುತ್ತೇನೆ’ ಎಂದು ಯುವಕ ಸಂದೇಶ ಕಳುಹಿಸಿದ್ದಾನೆ. ಈ ಸಂಬಂಧ ಕುಟುಂಬಸ್ಥರು ಬ್ಯಾಂಕ್ ಉದ್ಯೋಗಿ ಸಂಚಿತ್ ಅರೋರಾ ಅವರ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.