ದೇಶದಲ್ಲಿಯೇ ಪ್ರಥಮ ಬಾರಿಗೆ ತಯಾರಾಗಿ ನಿಂತಿದೆ ಫುಡ್ ಡೆಲಿವರಿಯ ‘ಧೀರಾ’ ರೊಬೋಟ್!!
ಜಗತ್ತು ಬೆಳವಣಿಗೆಯತ್ತ ದಾಪು ಕಾಲಿಡುತ್ತಿದ್ದಂತೆ, ಎಲ್ಲವೂ ಟೆಕ್ನಾಲಜಿಯುತವಾಗಿದೆ. ಪ್ರತಿಯೊಂದು ಕೆಲಸಕ್ಕೂ ಮನುಷ್ಯರ ಬದಲು ಯಂತ್ರಗಳು ಸಾಲುಗಟ್ಟಿದೆ. ಹೊಸ-ಹೊಸ ಯಂತ್ರಗಳು ತಯಾರಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ದೇಶದಲ್ಲಿಯೇ ಪ್ರಥಮ ಬಾರಿಗೆ ಫುಡ್ ಡೆಲಿವರಿ ರೊಬೋಟ್ಗಳು ತಯಾರಾಗಿ ನಿಂತಿದೆ.
ರೊಬೋಟ್ಗಳು ಹೈದರಾಬಾದಿನಲ್ಲಿ ಫುಡ್ ಡೆಲಿವರಿ ಮಾಡಲಿದ್ದು, ಇನ್ನು ಮುಂದೆ ಸ್ವಿಗ್ಗಿ, ಜೊಮ್ಯಾಟೊ ಹುಡುಗರು ನಿಮ್ಮ ಗೇಟೆಡ್ ಕಮ್ಯೂನಿಟಿಯೊಳಗಡೆ ಬರುವ ಅಗತ್ಯವಿರಲಾರದು. ಅಪಾರ್ಟಮೆಂಟ್ ಅಥವಾ ಗೇಟೆಡ್ ಕಮ್ಯೂನಿಟಿಯ ಗೇಟಿನಲ್ಲೇ ಡೆಲಿವರಿ ಬಾಯ್ಗಳು ಫುಡ್ ಪ್ಯಾಕೆಟ್ಗಳನ್ನು ಈ ರೊಬೋಟ್ಗಳಿಗೆ ಕೊಟ್ಟರಾಯಿತು. ಇವು ನೇರವಾಗಿ ಅದು ಯಾರ ಮನೆಗೆ ತಲುಪಬೇಕೋ ಅಲ್ಲಿಗೆ ತಲುಪಿಸುತ್ತವೆ.
ಗೇಟೆಡ್ ಕಮ್ಯೂನಿಟಿಗಳಲ್ಲಿ ಹಾಗೂ ಅಪಾರ್ಟಮೆಂಟುಗಳಲ್ಲಿ ಈ ರೊಬೋಟ್ಗಳು ಕೆಲಸ ಮಾಡಲಿದ್ದು, ಡೆಲಿವರಿ ಬಾಯ್ಗಳ ಬದಲಾಗಿ ರೊಬೋಟ್ಗಳೇ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಆಹಾರದ ಪೊಟ್ಟಣವನ್ನು ತರಲಿವೆ. ನೂತನ ತಂತ್ರಜ್ಞಾನದಿಂದ ತಯಾರಾಗಿರುವ ಈ ಮುದ್ದಾದ ರೊಬೋಟ್ಗಳಿಗೆ ‘ಧೀರಾ’ ಎಂದು ಹೆಸರಿಡಲಾಗಿದೆ.
ಹೈದರಾಬಾದ್ ಮೂಲದ ಎಕ್ಸ್ಪ್ರೆಸ್ ಟೆಕ್ನೊಲಾಜಿಸ್ಟಿಕ್ಸ್ ಎಂಬ ಸ್ಟಾರ್ಟಪ್ ಕಂಪನಿಯು ಈ ಧೀರಾ ರೊಬೋಟ್ಗಳನ್ನು ಕಾರ್ಯಾಚರಣೆಗೆ ತರುತ್ತಿದೆ. ಆರಂಭದಲ್ಲಿ ನಾರಸಿಂಗಿ ಪ್ರದೇಶದಲ್ಲಿ ಗೇಟೆಡ್ ಕಮ್ಯೂನಿಟಿಯೊಳಗೆ ಎರಡು ರೊಬೋಟ್ಗಳನ್ನ ನಿಯೋಜಿಸಲಾಗುತ್ತಿದೆ. ಇದೇ ತಿಂಗಳು 28 ರಿಂದ ಇವು ಕೆಲಸ ಮಾಡಲಾರಂಭಿಸುತ್ತವೆ. ಶೀಘ್ರದಲ್ಲೇ ಇನ್ನಷ್ಟು ಡೆಲಿವರಿ ರೊಬೋಟ್ಗಳನ್ನು ನಾವು ತರಲಿದ್ದೇವೆ ಎಂದು ಎಕ್ಸ್ಪ್ರೆಸ್ ಟೆಕ್ನೊಲಾಜಿಸ್ಟಿಕ್ಸ್ ಸಿಇಒ ಶ್ರೀನಿವಾಸ್ ತಿಳಿಸಿದರು.
ಒಂದು ಬಾರಿಗೆ ಒಂದು ಧೀರಾ ರೊಬೋಟ್ 16 ಪಾರ್ಸಲ್ಗಳನ್ನು ಕೊಂಡೊಯ್ಯಬಹುದು. ಡೆಲಿವರಿ ಬಾಯ್ಗಳು ಈ ರೊಬೋಟ್ನ ಬಾಕ್ಸ್ನಲ್ಲಿ ಫುಡ್ ಪ್ಯಾಕೆಟ್ಗಳನ್ನಿಟ್ಟು, ರೊಬೋಟ್ ಕೀಪ್ಯಾಡ್ನಲ್ಲಿ ಫ್ಲ್ಯಾಟ್ ನಂಬರ್ ಒತ್ತಿದರಾಯಿತು. ರೊಬೋಟ್ ತಕ್ಷಣವೇ ಪ್ಯಾಕೆಟ್ ಅನ್ನು ಸರಿಯಾದ ಮನೆಗೆ ತಲುಪಿಸುತ್ತದೆ. ರೊಬೋಟ್ ನಿಮ್ಮ ಮನೆಯ ಬಾಗಿಲಿಗೆ ಬಂದ ತಕ್ಷಣ ಫೋನಿಗೆ ಓಟಿಪಿ ಬರುತ್ತದೆ. ಓಟಿಪಿ ಒತ್ತಿದ ತಕ್ಷಣ ರೊಬೋಟ್ ನಿಮಗೆ ಪಾರ್ಸಲ್ ನೀಡುತ್ತದೆ. ಬಹುಮಹಡಿ ಕಟ್ಟಡಗಳಲ್ಲೂ ಕೆಲಸ ಮಾಡುವಂತೆ ಇವನ್ನು ತಯಾರಿಸಲಾಗಿದೆ. ಲಿಫ್ಟ್ನಲ್ಲಿರುವ ಚಿಪ್ ಒಂದರ ಸಹಾಯದಿಂದ ಇವು ಸರಿಯಾದ ಮಹಡಿಗೆ ಹೋಗಬಲ್ಲವು.