ದ.ಕ : ಸುಳ್ಯ ತಾಲೂಕಿನಲ್ಲಿ ಭೂಕಂಪನ | ಭಯಗೊಂಡು ಮನೆಯಿಂದ ಹೊರಕ್ಕೆ ಬಂದ ಜನತೆ!
ಸುಳ್ಯ: ತಾಲೂಕಿನಲ್ಲಿ ಬೆಳಗ್ಗೆಯೇ ಭೂಕಂಪನವಾದ ಜನರಿಗೆ ಅನುಭವವಾಗಿದೆ. ಈ ರೀತಿಯಾದಾಗ ಜನರು ಮನೆಯಿಂದ ಭಯಗೊಂಡು ಹೊರಗೋಡಿ ಬಂದ ಘಟನೆ ನಡೆದಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತಗೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಬೆಳಿಗ್ಗೆ 9.10, 9.11ರ ಸಮಯದಲ್ಲಿ ಲಘು ಕಂಪನದ ಅನುಭವ ಆಗಿದ್ದು, ಹಲವೆಡೆ ವಿಚಿತ್ರ ಶಬ್ದದೊಂದಿಗೆ ಭೂಮಿ ಕಂಪಿಸಿರುವ ಬಗ್ಗೆ ಸಾರ್ವಜನಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಅಡ್ತಲೆ, ಅರಂತೋಡು, ಅರಂಬೂರು ಮತ್ತಿತರ ಭಾಗಗಳಲ್ಲಿ ಗುಡುಗಿನ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ.
ಗೂನಡ್ಕದಲ್ಲಿ ಕಚೇರಿಯಲ್ಲಿ ಕುಳಿತಿದ್ದಾಗ ಭಾರೀ ಶಬ್ದದೊಂದಿಗೆ ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿಯೂ ಲಘು ಭೂ ಕಂಪನ ಆಗಿದೆ. ಬೀರಮಂಗಲ ಭಾಗದಲ್ಲಿ ಗುಡುಗಿನ ಶಬ್ದದೊಂದಿಗೆ ಸುಮಾರು 4- 5 ಸೆಕೆಂಡುಗಳ ಕಾಲ ವೈಬ್ರೇಷನ್ ಆಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಕಂಪನದ ಅನುಭವ ಆಗಿರುವ ಬಗ್ಗೆ ಸಾರ್ವಜನಿಕರು ಹೇಳಿ ಕೊಂಡಿದ್ದಾರೆ.