ಪ್ರವಾಸಕ್ಕೆ ಬಂದ 87 ವಿದ್ಯಾರ್ಥಿಗಳ ಪೈಕಿ ನಾಲ್ವರು ನೀರು ಪಾಲು | ಮೋಜು, ಮಸ್ತಿಯಿಂದ ಪ್ರಾಣ ಹೋಗುವವರೆಗೆ…
ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿರೋ ಹಿನ್ನೆಲೆ ಕರಾವಳಿ ಭಾಗದಲ್ಲಂತೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರೊಂದಿಗೆ ಕಡಲ ಅಬ್ಬರ ಕೂಡಾ ಹೆಚ್ಚಾಗಿದ್ದು, ಈಗಾಗಲೇ ಕೆಲವರನ್ನು ಬಲಿ ಪಡೆದುಕೊಂಡಿದೆ.
ಈ ಕಾರಣಗಳಿಂದ ಉತ್ತರಕನ್ನಡ ಜಿಲ್ಲಾಡಳಿತ ಯಾರೂ ಕೂಡಾ ಕಡಲತೀರಕ್ಕೆ ತೆರಳಬಾರದು ಎಂಬ ಎಚ್ಚರಿಕೆಯನ್ನು ಕೂಡಾ ನೀಡಿದೆ. ಇಷ್ಟಿದ್ದರೂ ಜಿಲ್ಲೆಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಮಾತು ಕೇಳದೇ ಕೆಲವೊಂದು ಸಾಹಸಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ 87 ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಅವರಲ್ಲಿ ಇಬ್ಬರ ಶವ ಪತ್ತೆಯಾಗಿದ್ದರೆ, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ದುರಂತ ಘಟನೆ ಸಂಭವಿಸದೆ.
ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ಸಮುದ್ರತೀರದಲ್ಲಿ ಈ ಅವಘಡ ನಡೆದಿದೆ. ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್‌ಗೆ ಬಂದಿದ್ದ ಈ ವಿದ್ಯಾರ್ಥಿಗಳು ಇಲ್ಲಿ ಸಮುದ್ರಕ್ಕಿಳಿದು ಮೋಜು ಮಸ್ತಿ ಮಾಡುತ್ತಿದ್ದರು. ಆಗ ಬೆಂಗಳೂರು ಮೂಲದ ಅರ್ಜುನ್, ಚೈತ್ರಶ್ರೀ, ತೇಜಸ್ ಡಿ., ಕಿರಣ್ ಕುಮಾರ್ ನೀರುಪಾಲಾಗಿದ್ದು, ಆ ಪೈಕಿ ಅರ್ಜುನ್, ಚೈತ್ರಶ್ರೀ ಶವ ಪತ್ತೆಯಾಗಿದೆ. ನಾಪತ್ತೆ ಆಗಿರುವ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.
ಸ್ಥಳಕ್ಕೆ ಕುಮಟಾ ಪೊಲೀಸರು ದೌಡಾಯಿಸಿದ್ದು, ನಾಪತ್ತೆ ಆದವರಿಗಾಗಿ ಅಗ್ನಿಶಾಮಕ ದಳ ಪೊಲೀಸರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.