ಕುವೆಂಪು ಅವರ ಪಾಠಗಳನ್ನು ತೆಗೆದುಹಾಕಿ, ಭಾರತೀಯ ಸಂಸ್ಕೃತಿಯನ್ನು ಮೂಲೆಗುಂಪು ಮಾಡಿದ್ದೇ ಸಿದ್ದರಾಮಯ್ಯ- ಆರ್. ಅಶೋಕ್
ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಪಾಠದ ಸೇರ್ಪಡೆ ಕುರಿತು ಅನೇಕ ರಾಜಕಾರಣಿಗಳ ನಡುವೆ ಮಾತು ಬೆಳೆದಿದ್ದು, ಇದೀಗ ಕಂದಾಯ ಸಚಿವ ಆರ್.ಅಶೋಕ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ.
‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪುವಿನ ಓಲೈಕೆಗಾಗಿ ರಾಜ್ಯದ ಅಭ್ಯುದಯಕ್ಕೆ ಶ್ರಮಿಸಿದ ಮೈಸೂರು ಒಡೆಯರ್ ವಂಶಕ್ಕೆ ಪಠ್ಯಪುಸ್ತಕಗಳಲ್ಲಿ ಅನ್ಯಾಯ ಮಾಡಿದೆ. ಕುವೆಂಪು ಅವರ ಪಾಠಗಳನ್ನು ತೆಗೆದುಹಾಕಿದ್ದೂ ಅಲ್ಲದೇ, ನಾಡಪ್ರಭು ಕೆಂಪೇಗೌಡರ ಕುರಿತು ಇದ್ದ ಪಾಠವನ್ನೂ ಕಿತ್ತು ಹಾಕಿಸಿದೆ’ ಎಂದು ಆರೋಪಿಸಿದರು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕಂದಾಯ ಸಚಿವ ಆರ್.ಅಶೋಕ ಅವರು, ‘ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ ಮತ್ತು ಪರಂಪರೆ ಯನ್ನು ಮೂಲೆಗುಂಪು ಮಾಡಿದೆ. ಇದಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರನ್ನು ಬಳಸಿಕೊಂಡಿದೆ’ ಎಂದು ಅವರು ಹರಿಹಾಯ್ದರು.
ಹಿಂದೆ ಬಿಜೆಪಿ ಸರ್ಕಾರ ಅವಧಿಯಲ್ಲಿ (2005–06) ಪಠ್ಯಪುಸ್ತಕಗಳಲ್ಲಿ ಕುವೆಂಪು ಅವರ 8 ಪದ್ಯ/ಗದ್ಯಗಳಿದ್ದವು. ಸಿದ್ದರಾಮಯ್ಯ ಸರ್ಕಾರ ಅದನ್ನು 7 ಕ್ಕೆ ಇಳಿಸಿತು. ಕುವೆಂಪು ಅವರ ‘ರಾಮಾಯಣ ದರ್ಶನಂ’ನ ಹಲವು ಅಂಶಗಳನ್ನು ಒಳಗೊಂಡಿದ್ದ ಗದ್ಯ ‘ಅನಲೆ’ಯನ್ನು ಕಿತ್ತು ಹಾಕಿದರು. ಉತ್ತಮ ಮಾನವೀಯ ಮೌಲ್ಯದ ರಚನೆಯನ್ನು ಸಿದ್ದರಾಮಯ್ಯ ತೆಗೆಸಿದ್ದು ಅಮಾನವೀಯ ಎಂದರು.
ಅಲ್ಲದೆ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರ ಪಾಠ ಇತ್ತು. ಸಿದ್ದರಾಮಯ್ಯ ಸರ್ಕಾರ ಇದನ್ನು ಕಿತ್ತು ಹಾಕಿತು. ಕೆಂಪೇಗೌಡರ ಯಾವುದೇ ಉಲ್ಲೇಖವೂ ಇಲ್ಲದಂತೆ ನೋಡಿಕೊಂಡರು. ‘ಕೆಂಪೇಗೌಡರ ಕನಸು’ ಎಂಬ ಪಾಠವನ್ನು ಪುನಃ ನಮ್ಮ ಸರ್ಕಾರ ಸೇರಿಸಿದೆ ಎಂದರು.
ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗಾಗಿ ಮೈಸೂರು ಅರಸರನ್ನು ಕಡೆಗಣಿಸಿ ಟಿಪ್ಪುವಿನ ವೈಭವೀಕರಣಕ್ಕಾಗಿ ಪಠ್ಯವನ್ನು ಬಳಸಿಕೊಂಡಿತು. ಕೆಆರ್‌ಎಸ್ ಅಣೆಕಟ್ಟೆ, ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್ ಸೇರಿದಂತೆ ಹಲವು ಮಹತ್ವ ಕೊಡುಗೆಗಳನ್ನು ನೀಡಿದ ಮೈಸೂರು ಒಡೆಯರ ಕುರಿತ ಪಾಠವನ್ನು ತೆಗೆದು ಹಾಕಿತು. 10 ನೇ ತರಗತಿಯಲ್ಲಿ ಟಿಪ್ಪುವಿನ ವೈಭವೀಕರಣಕ್ಕೆ 6 ಪುಟಗಳನ್ನು ಉಪಯೋಗಿಸಿಕೊಂಡರು.
ಹಿಂದೂ ದೇವಾಲಯಗಳನ್ನು ಮುಸ್ಲಿಂ ಆಕ್ರಮಣಕಾರರು ನಾಶ ಮಾಡಿದರು ಎಂಬ ಅಂಶ ಮಕ್ಕಳು ತಿಳಿದುಕೊಳ್ಳಬಾರದು ಎಂಬುದು ಸಿದ್ದರಾಮಯ್ಯ ಅವರ ಆಶಯ. ಅದಕ್ಕೆ ಪೂರಕವಾಗಿ ಬರಗೂರು ರಾಮಚಂದ್ರಪ್ಪ ನೈಜ ಚರಿತ್ರೆಯನ್ನು ಮುಚ್ಚಿಡುವ ಕೆಲಸ ಮಾಡಿದರು. ಸೂಕ್ತ ಆದೇಶ ಇಲ್ಲದೇ ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ ಎಂಬ ವಿಷಯವನ್ನು ಒಪ್ಪಿಕೊಳ್ಳದ ಅಶೋಕ, ಘಟನೋತ್ತರ ಅನುಮೋದನೆ ಪಡೆದು, ಪರಿಷ್ಕರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಾದಿಸಿದರು.