ಎಲೆಕ್ಟ್ರಿಕ್ ಕಾರು ಮಾಲೀಕರಿಗೆ ಶಾಕ್ !! | ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಟಾಟಾ ನೆಕ್ಸಾನ್ ಇವಿ
ಭಾರತದ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಆದರೆ ಇದೀಗ ಟಾಟಾ ನೆಕ್ಸಾನ್ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡಿರೋ
ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇರುವುದು ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಶಾಕ್ ನೀಡಿದೆ.
ಹೌದು. ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್ ಇವಿ ಕಾರು ಬೆಂಕಿಗಾಹುತಿಯಾಗಿರೋ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರೊಂದು ಹೊತ್ತಿ ಉರಿದಿರೋದು ಇದೇ ಮೊದಲು. ದುರ್ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರೋ ಸಂಸ್ಥೆ, ಬೆಂಕಿ ಹೊತ್ತಿಕೊಂಡಿದ್ದೇಗೆ ಎಂಬ ಬಗ್ಗೆ ತನಿಖೆ
ನಡೆಸುತ್ತಿದೆ.
ವಾಹನ ಮತ್ತದರ ಬಳಕೆದಾರರ ಸುರಕ್ಷತೆ ಕಾಪಾಡುವಲ್ಲಿ ನಾವು ಬದ್ಧರಾಗಿದ್ದೇವೆ ಎಂದಿರೋ ಸಂಸ್ಥೆ ಸಂಪೂರ್ಣ ತನಿಖೆ ಬಳಿಕ ಘಟನೆಗೆ ಸಂಬಂಧಪಟ್ಟ ಮತ್ತಷ್ಟು ವಿವರ ನೀಡುವುದಾಗಿ ತಿಳಿಸಿದೆ. ಮೂಲಗಳ ಪ್ರಕಾರ, ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮಾಲೀಕ ತನ್ನ ಕಚೇರಿಯಲ್ಲಿ ಹಾಕಿದ್ದ ಚಾರ್ಜರ್ ಮೂಲಕವೇ ಕಾರನ್ನು ಚಾರ್ಜ್ ಮಾಡಿದ್ದ.
ಮಾಲೀಕ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಹೊರಟಿದ್ದಾನೆ. ಕಚೇರಿಯಿಂದ ಸುಮಾರು 5 ಕಿ.ಮೀ ದೂರ ಹೋಗುವಷ್ಟರಲ್ಲಿ ವಾರ್ನಿಂಗ್ ಬರಲು ಶುರುವಾಗಿದೆ. ಡ್ಯಾಶ್ ಬೋರ್ಡ್ ಮೂಲಕ ಬೆಂಕಿ ಕಿಡಿ ಕಾಣಿಸಿಕೊಂಡಿತ್ತು. ಕೂಡಲೇ ಅಲರ್ಟ್ ಆದ ಆತ ಕಾರಿನಿಂದ ಕೆಳಕ್ಕಿಳಿದಿದ್ದಾನೆ. ಕ್ಷಣಮಾತ್ರದಲ್ಲಿ ಕಾರು ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಬಳಿಕ ಬೆಂಕಿ ಆರಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿವೆ. ಸುಮಾರು 30 ಸಾವಿರ ವಾಹನಗಳು ಈಗಾಗ್ಲೆ ಮಾರಾಟವಾಗಿವೆಯಂತೆ. ಆದ್ರೆ ಇಂತಹ ದುರ್ಘಟನೆ ನಡೆದಿರುವುದು ಇದೇ ಮೊದಲು ಎಂದು ಕಂಪನಿ ಹೇಳಿಕೊಂಡಿದೆ.
ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಅತಿ ಹೆಚ್ಚು
ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಪ್ರತಿ ತಿಂಗಳು ಕನಿಷ್ಠ 2,500-3,000 ಕಾರುಗಳು ಮಾರಾಟವಾಗುತ್ತಿವೆ. ಕಂಪನಿಯು ಇಲ್ಲಿಯವರೆಗೆ 30,000 Nexon EV ಗಳನ್ನು ಮಾರಾಟ ಮಾಡಿದೆ. ಈ ಹಿಂದೆಯೂ ಬ್ಯಾಟರಿ ಸ್ಫೋಟದಿಂದಾಗಿ ಹಲವಾರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿರೋ ಘಟನೆಗಳು ನಡೆದಿವೆ. ಓಲಾ ಎಲೆಕ್ಟ್ರಿಕ್, ಪ್ಯೂರ್ ಇವಿ, ಜಿತೇಂದ್ರ ಇವಿ ಟೆಕ್, ಅಥರ್ ಎನರ್ಜಿ ಮತ್ತು ಓಕಿನಾವಾ ಮುಂತಾದ ಇವಿ ತಯಾರಕರ ಬಗ್ಗೆ ಸರ್ಕಾರವೂ ತನಿಖೆ ಕೈಗೆತ್ತಿಕೊಂಡಿದೆ. ದ್ವಿಚಕ್ರ ವಾಹನಗಳ ಬೆನ್ನಲ್ಲೇ ಎಲೆಕ್ಟ್ರಿಕ್ ಕಾರು ಕೂಡ ಬೆಂಕಿಗೆ ಆಹುತಿಯಾಗಿರೋದು ಇದೀಗ ಆತಂಕ ಹೆಚ್ಚಿಸಿದೆ.