ಸ್ತನ ಕ್ಯಾನ್ಸರ್ ಕುರಿತು ಆತಂಕಪಡುವ ಮಹಿಳೆಯರಿಗೆ ಇಲ್ಲಿದೆ ನೆಮ್ಮದಿಯ ಸುದ್ದಿ !!
ಭಾರತದಲ್ಲಿ ತಂತ್ರಜ್ಞಾನ ಬಹು ಬೇಗನೆ ಬೆಳೆಯುತ್ತಿದೆ. ದಿನಕ್ಕೊಂದು ಹೊಸ ರೀತಿಯ ತಂತ್ರಜ್ಞಾನ ಭಾರತದಲ್ಲಿ ಹುಟ್ಟಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರವೇ. ಹಾಗೆಯೇ ಇದೀಗ ರಕ್ತ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ತಂತ್ರಜ್ಞಾನ ಭಾರತದಲ್ಲೂ ಲಭ್ಯವಿದೆ.
ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ಸ್ನೊಂದಿಗೆ ಪಾಲುದಾರಿಕೆ ಹೊಂದಿರುವ ಖಾಸಗಿ ಕಂಪನಿ ಡಾಟರ್ ಕ್ಯಾನ್ಸರ್ ಜೆನಿಟಿಕ್ಸ್ ವತಿಯಿಂದ ಈ ತಂತ್ರಜ್ಞಾನವನ್ನು ಭಾರತದಲ್ಲಿ ಜೂ.22ರಂದು ಆರಂಭಿಸಲಾಗಿದೆ.
ಹೊಸ ತಂತ್ರಜ್ಞಾನದ ಮೂಲಕ ನಡೆಸುವ ರಕ್ತ ಪರೀಕ್ಷೆಯು 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ತನ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಯೂರೋಪ್ನ ಹಲವು ದೇಶಗಳು ಸೇರಿದಂತೆ 15 ರಾಷ್ಟ್ರಗಳು ಅಳವಡಿಸಿಕೊಂಡ ಹೊಸ ಮಾದರಿಯ ರೋಗನಿರ್ಣಯ ತಂತ್ರಜ್ಞಾನ ಇದಾಗಿದೆ. ಈ ರಕ್ತ ಪರೀಕ್ಷೆಯ ಫಲಿತಾಂಶವು ಶೇ.99 ರಷ್ಟು ನಿಖರತೆಯನ್ನು ಹೊಂದಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಲೇ ಇದೆ. ರೋಗಿಗಳ ಆರೈಕೆ, ಚಿಕಿತ್ಸೆಯ ವೆಚ್ಚವು ದುಬಾರಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಮಾತ್ರ ಇಂತಹ ಪ್ರಕರಣಗಳನ್ನು ತ್ವರಿತವಾಗಿ ನಿರ್ವಹಿಸಲು ಸಾಧ್ಯ. ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಪತ್ತೆ ಹೆಚ್ಚಿದರೆ, ಅವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಇದು ಜೀವಿತಾವಧಿಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಎದುರಿಸುವ ತೊಂದರೆಗಳನ್ನು ಕಡಿಮೆ ಮಾಡಬಹುದು ಎಂಬುದು ವೈದ್ಯರ ಅಭಿಪ್ರಾಯ.
ಕಳೆದ ವರ್ಷ ನವೆಂಬರ್ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ನಿಂದ ಹೊಸ ತಂತ್ರಜ್ಞಾನದ ರಕ್ತ ಪರೀಕ್ಷೆಯನ್ನು ಅನುಮೋದಿಸಲಾಗಿದೆ. ಈ ರಕ್ತ ಪರೀಕ್ಷೆ ಮೂಲಕ 0 ಹಾಗೂ 1ನೇ ಹಂತದ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಶೇ.99 ರಷ್ಟು ನಿಖರತೆಯೊಂದಿಗೆ ಪತ್ತೆಹಚ್ಚಲಾಗಿದೆ ಎಂಬುದನ್ನು ಅಧ್ಯಯನವು ಸಾಬೀತುಪಡಿಸಿದೆ.
ʻಈಸಿಚೆಕ್ ಬ್ರೆಸ್ಟ್ʼ ಎಂದೇ ಹೆಸರಾಗಿರುವ ಈ ಪರೀಕ್ಷೆಗೆ 6,000 ರೂ. ವೆಚ್ಚ ತಗುಲುತ್ತದೆ. ಕಳೆದ ವರ್ಷ ನವೆಂಬರ್ನಲ್ಲಿ US ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಅನುಮೋದಿಸಿದೆ. ಯಾವುದೇ ರೋಗಲಕ್ಷಣ ಹೊಂದಿರದ 40 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ಮಹಿಳೆಯರಿಗೆ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚಿಸಿದೆ.
ಮ್ಯಾಮೊಗ್ರಾಫಿಗೆ (ಸ್ತನ ಪರೀಕ್ಷೆಗೆ ಚಾಲ್ತಿಯಲ್ಲಿರುವ ವಿಧಾನ) ಬದಲಿ ಪರೀಕ್ಷೆ ವಿಧಾನ ಇದಲ್ಲ. ಈ ಹೊಸ ತಂತ್ರಜ್ಞಾನ ಬಳಸಿಕೊಂಡು ಸ್ತನ ಕ್ಯಾನ್ಸರ್ ಪಾಸಿಟಿವ್ ಬರುವ ಮಹಿಳೆಯರು ಸಾಂಪ್ರದಾಯಿಕ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎನ್ನುತ್ತಾರೆ ದೆಹಲಿಯ ಅಪೋಲೋ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ. ರಮೇಶ್ ಸರಿನ್.
ಒಂದು ವೇಳೆ ಈ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಮಹಿಳೆಯರು ಕ್ಯಾನ್ಸರ್ನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು. ಇತರ ಸ್ಕ್ರೀನಿಂಗ್ ಪರೀಕ್ಷೆಗಳಿಗೆ ಹೋಗಬಹುದು ಎಂದು ವೈದ್ಯರು ಸೂಚಿಸುತ್ತಾರೆ.