OMG, ತೀರ್ಥ ಕುಡಿಯುವಾಗ ‘ಬಾಲಕೃಷ್ಣ’ ನುಂಗಿದ ಭಕ್ತ | ಮುಂದೇನಾಯ್ತು?
ವ್ಯಕ್ತಿಯೊಬ್ಬರು ತೀರ್ಥ ಸೇವನೆ ವೇಳೆ ಅಂಗೈನಲ್ಲಿದ್ದ ಬಾಲಕೃಷ್ಣನ ಲೋಹದ ಮೂರ್ತಿಯನ್ನು ನುಂಗಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಮೂರ್ತಿಯನ್ನು ನುಂಗಿದ್ದಾರೆ.
ಘಟನೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಿಂದ ಬೆಳಕಿಗೆ ಬಂದಿದೆ.
ಈ ವ್ಯಕ್ತಿ ಪ್ರತಿ ದಿನ ದೇವರ ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು. ಎಂದಿನಂತೆ ಪೂಜೆ ಮಾಡಿದ ಬಳಿಕ ತೀರ್ಥ ಸೇವಿಸುವಾಗ ಈ ಘಟನೆ ನಡೆದಿದೆ. ಹೌದು.. 45 ವರ್ಷದ ವ್ಯಕ್ತಿಯೊಬ್ಬ ನಿತ್ಯ ಮನೆಯಲ್ಲಿ ಪೂಜೆ ಮಾಡಿ, ದೇವರ ತೀರ್ಥ ಸೇವಿಸಿ, ಎಂದಿನಂತೆ ಪೂಜೆ ನೆರವೇರಿಸಿದ ನಂತ್ರ, ತೀರ್ಥ ಕುಡಿಯೋ ಸಂದರ್ಭದಲ್ಲಿ 50 ಗ್ರಾಂ ತೂಕದ ವಿಗ್ರಹ ಕೂಡ ನುಂಗಿ ಬಿಟ್ಟಿದ್ದಾನೆ. ಬಳಿಕ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿದೆ. ಕೂಡಲೇ ಸ್ಥಳೀಯ ವೈದ್ಯರನ್ನು ಆತ ಸಂಪರ್ಕಿಸಿದ್ದಾರೆ.
ಎಂಡೋಸ್ಕೋಪ್ ಮಾಡಿರುವ ವೈದ್ಯರು ಬಾಲಕೃಷ್ಣನ ಮೂರ್ತಿಯ ಕಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಇಎನ್ಟಿ ವಿಭಾಗದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ಮೂರ್ತಿಯನ್ನು ಹೊರತೆಗೆಯುವುದು ವೈದ್ಯರಿಗೆ ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಮೂರ್ತಿಯ ಕಾಲು ಆಹಾರ ನಾಳದಲ್ಲಿ ಸಿಲುಕಿತ್ತು. ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.