ಸ್ತ್ರೀಶಕ್ತಿ ಸಂಘಗಳಿಗೆ ಗುಡ್ ನ್ಯೂಸ್ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಅಕ್ಟೋಬರ್ 2 ರಂದು ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 

ಅವರು ಇಂದು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, – ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಸುಮಂಗಲಿ ಸೇವ ಆಶ್ರಮ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶವನ್ನು ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಪ್ರಥಮ ಬಾರಿ ಆಯವ್ಯಯದಲ್ಲಿ 1.5 ಲಕ್ಷ ರೂ.ಗಳ ಆರ್ಥಿಕ ನೆರವು, ಆಯಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್‍ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಮೆಜಾನ್ ನಂತಹ ಆನ್‍ಲೈನ್ ವೇದಿಕೆಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ವಹಿವಾಟನ್ನು ಮಾಡುತ್ತಿದೆ. ಇದು ಸಂಘಟಿತವಾದ ಶ್ರಮದ ಶಕ್ತಿ ಎಂದು ತಿಳಿಸಿದರು.

ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ನಮ್ಮ ಸ್ಥಳೀಯಮಟ್ಟದ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟವಾಗಬೇಕು ಎನ್ನುವ ಆಸೆ ಸರ್ಕಾರದ್ದು. ಆಗ ನಮ್ಮ ಆರ್ಥಿಕತೆಗೆ ಬಹಳ ಶಕ್ತಿ ಬರುತ್ತದೆ. ಈ ದೇಶದಲ್ಲಿನ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕಿದೆ. ಅವರಿಗೆ ಆರ್ಥಿಕ ಸ್ವಾತಂತ್ರ್ಯ ಬಂದಾಗ ಶೈಕ್ಷಣಿಕ, ಸಾಮಾಜಿಕವಾಗಿಯೂ ಸಬಲರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸೇವಾಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಒಳ್ಳೆಯ ಕೆಲಸ ಮಾಡುವ ಚಿಂತನೆ ಪ್ರೇರಣೆ ದೊರಕುತ್ತದೆ. ಪ್ರತಿ ವರ್ಷ ಕನಿಷ್ಟ 5 ಕ್ಷೇತ್ರಗಳಿಗೆ ಗುರಿ ನಿಗದಿಸಿ ಸಾಧಿಸಲು ಪ್ರಯತ್ನಸಿ, ಸರ್ಕಾರವೂ ಪೂರಕ ಸಹಕಾರವನ್ನು ನೀಡುತ್ತದೆ ಎಂದರು.

ರೈತ ಉತ್ಪನ್ನಗಳ ಸಂಘಗಳ ಮೂಲಕ ರೈತ ಉತ್ಪನ್ನಗಳ ಮೌಲ್ಯವರ್ಧನೆ, ಹೆಚ್ಚಿನ ದರದಲ್ಲಿ ಮಾರಾಟಕ್ಕೆ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ಅದನ್ನು ಕರ್ನಾಟಕದಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೀನುಗಾರಿಕೆ, ಕುಶಲಕರ್ಮಿಗಳಿಗೂ ಈ ಯೋಜನೆಗಳನ್ನು ವಿಸ್ತರಣೆ ಮಾಡುವ ಮೂಲಕ ಸ್ಥಳೀಯ ಕುಶಲಕರ್ಮಿಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಸರ್ಕಾರ ನಿಮ್ಮೊಂದಿಗಿದೆ. ಮಹಿಳೆಯರು ನಿಸರ್ಗದತ್ತವಾಗಿ ಶಕ್ತಿಯನ್ನು ಹೊಂದಿರುತ್ತಾರೆ. ಶಕ್ತಿಯ ಗುಣ ತಾಳ್ಮೆ. ಅದರಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯ. ನಮ್ಮದು ಉಳಿತಾಯ ಮಾಡುವ ಸಂಸ್ಕೃತಿ. ಸಂಸ್ಕೃತಿಯ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ದುಡಿಮೆಯನ್ನು ಗುರುತಿಸಬೇಕು. ನಿಮ್ಮ ಶ್ರಮಕ್ಕೆ ಬೆಲೆ, ಸ್ಥಾನಕ್ಕೆ ಗೌರವ, ನಿಮ್ಮ ಅಸ್ತಿತ್ವಕ್ಕೆ ದೊಡ್ಡ ಗುರುತು, ಬೆಂಬಲ ಕೊಟ್ಟಾಗ ದೇಶ ಸಮೃದ್ಧವಾಗಿ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರ ಮಹಿಳೆಯರಿಗೆ ರೂಪಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

Leave A Reply

Your email address will not be published.