ಇನ್ನೆರಡು ವಾರಗಳ ಕಾಲ ಶಟ್‍ಡೌನ್ ಆಗಲಿದೆ ದ್ವೀಪರಾಷ್ಟ್ರ !!
ಇನ್ನೆರಡು ವಾರಗಳ ಕಾಲ ಶಟ್‍ಡೌನ್ ಆಗಲಿದೆ ಈ ದ್ವೀಪ ರಾಷ್ಟ್ರ. ಕಾರಣ ಆ ದೇಶದಲ್ಲಿ ತೈಲ ಸಂಗ್ರಹ ಅತ್ಯಂತ ವೇಗವಾಗಿ ಕಡಿಮೆ ಆಗ್ತಿದೆ. ಇರೋದನ್ನು ತುರ್ತು ಸೇವೆಗಳಿಗೆ ಬಳಸಿಕೊಳ್ಳುವ ಸಲುವಾಗಿ ಶ್ರೀಲಂಕಾ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.
ಶಟ್‍ಡೌನ್ ಭಾಗವಾಗಿ ಶಾಲೆ-ಕಾಲೇಜ್‍ಗಳು ಬಂದ್ ಆಗಿವೆ. ತುರ್ತು ಸೇವೆಗಳನ್ನು ಒದಗಿಸುವ ಸರ್ಕಾರಿ ಕಚೇರಿಗಳಷ್ಟೇ ಓಪನ್ ಆಗಿದ್ದು, ಆಸ್ಪತ್ರೆಗಳು ಮತ್ತು ಕೊಲಂಬೋ ನೌಕಾನೆಲೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪೆಟ್ರೋಲ್ ಬಂಕ್‍ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಸರಕಾರಿ ಉದ್ಯೋಗಿಗಳಿಗೆ ಎರಡು ವಾರಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಪ್ರತಿಭಟನೆಗಳು ಮುಂದುವರೆದಿದ್ದು, ಗೋ ಗೋ ಗೊಟಬಯ ಹೋರಾಟ 73 ದಿನ ಪೂರೈಸಿದೆ.
ದೇಶದ ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಕಾರರು, ಅಧ್ಯಕ್ಷರ ಸಚಿವಾಲಯದ ಎಲ್ಲಾ ಪ್ರವೇಶದ್ವಾರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೌದ್ಧ ಧರ್ಮದ ಗುರು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಭಟನಕಾರರು ಅಧ್ಯಕ್ಷರ ಸಚಿವಾಲಯದ ಎರಡು ಪ್ರವೇಶದ್ವಾರಗಳನ್ನು ಬಂದ್ ಮಾಡಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ತಂಡವು ದೇಶದ ಆರ್ಥಿಕ ಇಲಾಖೆಯ ಕಚೇರಿಗೆ ಭೇಟಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಪ್ರವೇಶ ದ್ವಾರಗಳಲ್ಲಿ ಪ್ರತಿಭಟನೆ ಕೈಗೊಂಡಿದ್ದವರನ್ನು ವಶಕ್ಕೆ ಪಡೆಯಲಾಗಿತ್ತು.
ದ್ವೀಪ ರಾಷ್ಟ್ರ ತನ್ನ ಸ್ವಾತಂತ್ರ್ಯದ ಬಳಿಕ ಎಂದೂ ಸಂಭವಿಸದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ 2 ಕೋಟಿಗೂ ಅಧಿಕ ಜನರು ಆಹಾರ, ಇಂಧನ ಹಾಗೂ ಔಷಧಕ್ಕಾಗಿ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದೇಶ ಭಾರೀ ಹಣದುಬ್ಬರ ಹಾಗೂ ಸುದೀರ್ಘ ವಿದ್ಯುತ್ ಕಡಿತವನ್ನೂ ಎದುರಿಸುತ್ತಿದೆ. ಈ ನಡುವೆ ಔಷಧಿಗಳು, ಅಡುಗೆ ಅನಿಲ, ಇಂಧನ ಮತ್ತು ಆಹಾರ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಕೊರತೆಯೊಂದಿಗೆ ಆರ್ಥಿಕ ಸ್ಥಿತಿಯು ಹದಗೆಟ್ಟು ಜನ ಬೀದಿಗಿಳಿದು ಸರ್ಕಾರದ ವಿರುದ್ಧ ಸಮರ ಸಾರುತ್ತಿದ್ದಾರೆ. ಅಗತ್ಯ ವಸ್ತುಗಳ ಆಮದಿಗೆ ಬೇಕಾದ ವಿದೇಶಿ ಕರೆನ್ಸಿ ಕೊರತೆ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಶ್ರೀಲಂಕಾ ಸರ್ಕಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ಮಾತುಕತೆ ನಡೆಸುತ್ತಿದ್ದು, ಬೇಲ್‌ಔಟ್ ಪ್ಯಾಕೇಜ್‌ಗಾಗಿ ಮನವಿ ಮಾಡಿದೆ.