ಇಂದು ಭಾರತ್ ಬಂದ್ !! ಯಾಕಾಗಿ?
ದೇಶದೆಲ್ಲೆಡೆ ತೀವ್ರ ಪ್ರತಿರೋಧದ ನಡುವೆ ಅಗ್ನಿಪಥ್ ಯೋಜನೆಯನ್ನು ಜಾರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಬೆನ್ನಲ್ಲೇ ಇಂದು ಭಾರತ್ ಬಂದ್ಗೆ ಪ್ರತಿಭಟನಾಕಾರರು ಕರೆ ನೀಡಿದ್ದಾರೆ.
ಪ್ರತಿಭಟನೆ ತೀವ್ರ ಕಾವು ಪಡೆದುಕೊಂಡಿರುವ ಬಿಹಾರದಿಂದ ಭಾರತ್ ಬಂದ್ ಘೋಷಣೆಯಾಗಿದ್ದು, ಇದಕ್ಕೆ ಇತರೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ. ಹೀಗಾಗಿ ಉತ್ತರದ ಕೆಲ ರಾಜ್ಯ ಬಿಟ್ಟರೇ ಇತರೆ ರಾಜ್ಯಗಳಲ್ಲಿ ಭಾರತ್ ಬಂದ್ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.
ಬಿಹಾರದಲ್ಲಿ ಸರ್ಕಾರ ಅಲರ್ಟ್ ಘೋಷಿಸಿದ್ದು, ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ಜಾರ್ಖಂಡ್ನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ವೇಳೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಅಥವಾ ಹಿಂಸಾಚಾರದಲ್ಲಿ ತೊಡಗಿದ ಕೂಡಲೇ ಬಂಧಿಸಿ ಎಂದು ಕೇರಳ ಸರ್ಕಾರ ಆದೇಶ ನೀಡಿದೆ. ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಪ್ರತಿಭಟನೆಯ ಕೇಂದ್ರಬಿಂದು ಬಿಹಾರದಲ್ಲಿ ಭಾನುವಾರ ಯಾವುದೇ ಪ್ರತಿಭಟನೆಗಳು ನಡೆದಿಲ್ಲ. ಜೂನ್ 16 ರಿಂದ 18 ರವರೆಗೆ 145 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಸರ್ಕಾರಿ ಆಸ್ತಿಗೆ ಹಾನಿ ಮಾಡಿದ 804 ಜನರನ್ನು ಬಂಧಿಸಲಾಗಿದೆ.
ಈ ನಡುವೆ ಅಗ್ನಿಪಥ್ ವಿರೋಧಿ ಹೋರಾಟಗಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಮಿಲಿಟರಿ ನೇಮಕಾತಿಗಾಗಿ ಸರ್ಕಾರ ಹೊಸದಾಗಿ ಪ್ರಕಟಿಸಿದ ಅಗ್ನಿಪಥಕ್ಕೆ ಅರ್ಜಿ ಹಾಕಿಕೊಳ್ಳುವವರು ಈ ಹಿಂದೆ ಯಾವುದೇ ಪ್ರತಿಭಟನೆ, ಹಿಂಸಾತ್ಮಕ ಕೃತ್ಯಗಳಲ್ಲಿ ಪಾಲ್ಗೊಂಡಿರುವುದಿಲ್ಲ ಎಂಬುದನ್ನು ಪ್ರಕಟಿಸಬೇಕಿದೆ. ಅರ್ಜಿ ಸಲ್ಲಿಕೆ ವೇಳೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಒಂದು ವೇಳೆ ಎಫ್ಐಆರ್ ದಾಖಲಾಗಿದ್ದು ಗೊತ್ತಾದರೇ ಅಂಥವರು ಅಗ್ನಿವೀರರಾಗಲು ಅರ್ಹರಲ್ಲ ಎಂದು ಮೂರು ದಳಗಳ ಸೇನಾ ಮುಖ್ಯಸ್ಥರು ಪ್ರಕಟಿಸಿದ್ದಾರೆ. ಹೊಸದಾಗಿ ಜಾರಿಗೆ ತರುತ್ತಿರುವ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಾವು ಊಹೆ ಮಾಡಿರಲಿಲ್ಲ. ಶಿಸ್ತು ಭಾರತೀಯ ಸೇನೆಯ ಬುನಾದಿ. ಅಂತಹ ಸೇನೆಯಲ್ಲಿ ದಾಳಿ, ದಹನದಂತ ಕೃತ್ಯಗಳಿಗೆ ಜಾಗ ಇಲ್ಲ. ಸೇನೆ ಸೇರುವ ಅಭ್ಯರ್ಥಿಗಳು ಪ್ರತಿಭಟನೆ, ಹಿಂಸಾಚಾರದಲ್ಲಿ ತೊಡಗಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಲೇಬೇಕು. ಸೇನೆಯಲ್ಲಿ ಉದ್ಯೋಗ ಎಂದರೇ ಭಾವೋದ್ವೇಗದಿಂದ ಕೂಡಿದ್ದಾಗಿದೆ. ಇದನ್ನು ವೇತನಕ್ಕೆ ಹೋಲಿಸಲು ಸಾಧ್ಯವೇ ಇಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅಭಿಪ್ರಾಯಪಟ್ಟಿದ್ದಾರೆ.
ಅಗ್ನಿಪಥ್ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದ ಆರೋಪದ ಮೇರೆಗೆ 35 ವಾಟ್ಸಪ್ ಗ್ರೂಪ್ಗಳ ವಿರುದ್ದ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. 35 ಗ್ರೂಪ್ಗಳನ್ನು ನಿಷೇಧಿಸಿರುವ ಕೇಂದ್ರ, ವದಂತಿ ಹಬ್ಬಿಸುತ್ತಿರುವವರನ್ನು ಟ್ರ್ಯಾಕ್ ಮಾಡುತ್ತಿದೆ. ಈವರೆಗೂ 10 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.