ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಮೊಳಗಿದ “ಬುಲ್ಡೋಜರ್” ಸದ್ದು | ಯಾಕಾಗಿ?
ರಾಜ್ಯದಲ್ಲಿ ಬುಲ್ಡೋಜರ್ ಸದ್ದು ಇಂದು ಬೆಳ್ಳಂಬೆಳಗ್ಗೆ ಶುರುವಾಗಿದೆ. ಕಲಬುರಗಿ ನಗರದ ಜಾಫರಾಬಾದ್ ಪ್ರದೇಶದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಗಳನ್ನು ಇಂದು ಬೆಳಗಿನ ಜಾವ ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸುವ ಮೂಲಕ ಅಕ್ರಮ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ.
ಇಂದು ಬೆಳ್ಳಂಬೆಳಗ್ಗೆ ಪೊಲೀಸರೊಂದಿಗೆ ತೆರಳಿದ ಜಿಲ್ಲಾಧಿಕಾರಿ ಯಶ್ವಂತ ಗುರುಕರ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ತಹಶೀಲ್ದಾರ ಪ್ರಕಾಶ ಕುದುರೆ, ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಸೇರಿಕೊಂಡು ಕಾರ್ಯಾಚರಣೆ ಶುರುವಿಟ್ಟಿದ್ದಾರೆ.
ಬೆಳಗಿನ ಜಾವ ನಾಲ್ಕು ಗಂಟೆಗೆ ಜೆಸಿಬಿ ಮೂಲಕ ಅಕ್ರಮ ಮನೆಗಳನ್ನು ನೆಲಸಮಗೊಳಿಸಲಾಯಿತು. ಸುಮಾರು 20 ಎಕರೆ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆ ಇನ್ನಿತರ ಕಟ್ಟಡ ನಿರ್ಮಿಸಿದ್ದಾರೆ. ಹಲವು ಸಲ ನೋಟೀಸ್ ನೀಡಲಾಗಿದ್ದರೂ ತೆರವು ಮಾಡದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. ಒತ್ತುವರಿ ದಂಧೆಕೋರರು ಸರ್ಕಾರಿ ಜಾಗ ಕಂಡಲ್ಲಿ ತಮ್ಮ ಅಕ್ರಮ ವಿಸ್ತರಿಸಿಕೊಳ್ಳುತ್ತಿರುವುದಕ್ಕೆ ಈ ಮೂಲಕ ಜಿಲ್ಲಾಡಳಿತ ಬ್ರೇಕ್ ಹಾಕಲು ದೃಢ ಹೆಜ್ಜೆ ಇಟ್ಟಿದೆ.