ಅಪ್ಪನೆಂಬ ಮುದ್ದು ಭಾವ
–ಮಹಿಮಾ ಭಟ್
‘ನಿನಗೆ ಮೊದಲು ಮುತ್ತು ಕೊಟ್ಟ ಹುಡುಗ ಯಾರು?’ ಎಂದು ಒಬ್ಬ ಹುಡುಗಿಗೆ ಪ್ರಶ್ನೆ ಕೇಳಿದಾಗ ಉತ್ತರ ಏನಾಗಿರಬಹುದು?. ಉತ್ತರ ನವಿರಾದ ಪವಿತ್ರ ಪ್ರೀತಿಯ ಮುನ್ನುಡಿ ಬರೆದು ಮಮಕಾರದಿಂದ ಅಪ್ಪ ನೀಡಿದ ಮೊದಲ ಮುತ್ತಾಗಿರುತ್ತದೆ. ಪ್ರತಿ ಮಗಳಿಗೆ ತಂದೆ ಹೀರೋ. ಅಪ್ಪ, ಮಗಳ ಆಂತರ್ಯದಲ್ಲಿ ಬೆರೆತುಬಿಟ್ಟಿರುತ್ತಾನೆ. ಹೇಗೆಂದರೆ ತಂದೆಯ ಒಳ್ಳೆಯ ಗುಣ ತನ್ನ ಜೀವನದಲ್ಲಿ ಬರುವ ಸಂಗಾತಿಗೆ ಇರಲಿ ಎಂದು ಬಯಸುತ್ತಾಳೆ. ತಂದೆಯಲ್ಲಿ ಕೆಟ್ಟ ಗುಣ ಕಂಡುಬಂದರೆ ಅದು ಸಂಗಾತಿಯಲ್ಲಿ ಇರದಿರಲಿ ಎಂದು ಎಚ್ಚರಿಕೆ ವಹಿಸುತ್ತಾಳೆ. ಮಗಳಿಗೆ ಜಗದ ಪುರುಷ ಪ್ರಪಂಚ ತೆರೆಯುವುದೇ ತಂದೆಯಿಂದ . ಕೆಲವೊಮ್ಮೆ ಅಮ್ಮನ ವಿಷಯದಲ್ಲಿ ಕೆಟ್ಟವನೆನಿಸಿದರೂ ಮಗಳ ವಿಷಯದಲ್ಲಿ ಅಪ್ಪ ಸದಾ ಒಳ್ಳೆಯವನು.
ಪುಣ್ಯಮಾಡಿದ ತಂದೆಗೆ ಮಗಳು ಹುಟ್ಟುತ್ತಾಳೆ ಎಂಬ ಮಾತಿದೆ. ಅದು ಸತ್ಯವೇನೊ. ಏಕೆಂದರೆ, ತಂದೆ ಮಗಳ ಸಂಬಂಧ ಅವಿನಾಭಾವ. ಪದಗಳಿಗೆ ನಿಲುಕದ ಮಧುರ ಭಾವ. ಪ್ರತಿ ಪುರುಷ ತನ್ನ ಜೀವನದಲ್ಲಿ ಹೆಂಡತಿಗಿಂತ ಮಗಳಿಗೆ ಪ್ರಾಶಸ್ತ್ಯ ನೀಡುತ್ತಾನೆ. ಮಗಳೆದುರು ಭಾವಪ್ರಪಂಚದಲ್ಲಿ ಮುಳುಗಿದ ತಂದೆ , ಮಗಳ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಸಿಡಿದ ವ್ಯಾಘ್ರನಾಗುತ್ತಾನೆ. ಮಗಳಿಗೆ ತಂದೆಯೆಂದರೆ ರಕ್ಷಾಕವಚ. ಆಕೆಯ ಆತ್ಮಸ್ಥೈರ್ಯ. ಅಪ್ಪ ಎಂದರೆ ಮಗಳ ಜೀವನವೆಂಬ ಕೋಟೆಯ ಭದ್ರಬುನಾದಿ.
ಬಿದ್ದಾಗ ಎದ್ದಾಗ ನೋವಾದಾಗ ಜನರು ಅಮ್ಮಾ ಎನ್ನುತ್ತಾರೆ. ಬಿದ್ದಾಗ ಎದ್ದಾಗಾ ನೋವಾದಾಗ ಅಮ್ಮ ಬರುತ್ತಾಳೆ. ಏಕೆಂದರೆ ಅಮ್ಮನ ಹಿಂದೆ ಅಪ್ಪ ನಿಂತಿರುತ್ತಾನೆ. ಹೆಚ್ಚಿನ ತಂದೆಯರು ಸಿನಿಮಾದಲ್ಲಿ ತೋರಿಸುವ ಹಾಗೆ ಭಾವನೆ, ಪ್ರೀತಿ ವ್ಯಕ್ತಪಡಿಸಿಕೊಳ್ಳುವುದಿಲ್ಲ. ಮನದಾಳದಲ್ಲಿ ಬೆಚ್ಚಗೆ ಬಚ್ಚಿಟ್ಟಿರುತ್ತಾರೆ. ಆದರೂ ಆ ಕೋಮಲ ಪ್ರೀತಿ ಮಗಳಿಗೆ ತಲುಪಿರುತ್ತದೆ.
ತಂದೆಯ ಪ್ರೀತಿ ಅರಮನೆಯಲ್ಲಿ, ಪ್ರತಿ ಮಗಳು ರಾಜಕುಮಾರಿಯಾಗುತ್ತಾಳೆ . ಇನ್ನು ಮಗಳು ಎಂದರೆ ತಂದೆಯ ಹೆಮ್ಮೆ. ತಂದೆಯ ಕಿರೀಟ. ಚಿಕ್ಕವಳಿದ್ದಾಗ ಸ್ನಾನ ಮಾಡಿಸಿ ಬಟ್ಟೆ ತೊಡಿಸಿದ ತಂದೆ
ದೊಡ್ಡವಳಾದ ನಂತರ ದೈಹಿಕವಾಗಿ ದೂರವಾಗುತ್ತಾನೆ ಆದರೆ ಮಾನಸಿಕವಾಗಿ ತೀರಾ ಆಪ್ತನಾಗುತ್ತಾನೆ. ಆಗ ಅಪ್ಪ ಪ್ರತಿಬಾರಿ ಕಷ್ಟದಲ್ಲಿ ಜೊತೆ ನಿಂತಾಗ ಮನದಲ್ಲೇ ಅಪ್ಪನಿಗೆ ಕೋಟಿ ಮುತ್ತನೀಡಿ ಧನ್ಯವಾದ ಅರ್ಪಿಸುತ್ತಾಳೆ ಅಪ್ಪನ ಮುದ್ದು ಮಗಳು. ತಂದೆ ಮಗಳ ಬಾಂಧವ್ಯ ಜೀವದಲ್ಲಿ ಕೊನೆಯವರೆಗೂ ಬೆರೆತ ನಂಟು. ಸರ್ವ ಅಪ್ಪ ಮಗಳ ಸಂಬಂಧಕ್ಕೆ ಕೋಟಿ ನಮನ.