4 ದಿನಗಳಿಂದ ನೂಪುರ್ ಶರ್ಮಾ ನಾಪತ್ತೆ !!
ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅವರು ವಿವಾದಿತ ಹೇಳಿಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಆದರೆ ನೂಪುರ್ ಶರ್ಮಾ ಅವರನ್ನು ಪೊಲೀಸರು ಠಾಣೆಗೆ ಕರೆಸಲು ಪ್ರಯತ್ನಿಸುತ್ತಿದ್ದು, 4 ದಿನಗಳಿಂದ ಹುಡುಕಾಡಿ ಸುಸ್ತಾಗಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡಿ ದೇಶ ವಿದೇಶಗಳಲ್ಲಿ ಕೆಂಗಣ್ಣಿಗೆ ಗುರಿಯಾದ ನೂಪುರ್ ಶರ್ಮಾ ಬಿಜೆಪಿ ಪಕ್ಷದ ವಕ್ತಾರೆ ಸ್ಥಾನದಿಂದಲೂ ಅಮಾನತಾಗಿದ್ದರು. ಬಳಿಕ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಅದರ ಆಧಾರದ ಮೇಲೆ ನೂಪುರ್ ಅವರನ್ನು ಕರೆಸಲಾಗಿತ್ತು. ಆದರೆ ಅವರಿಗೆ ಸಮನ್ಸ್ ಪೇಪರ್ ಹಸ್ತಾಂತರಿಸುವುದು ಹೇಗೆ ಎಂಬ ಪ್ರಶ್ನೆ ಪೊಲೀಸರಿಗೆ ಮೂಡಿದೆ. ಕಳೆದ 4 ದಿನಗಳಿಂದ ನೂಪುರ್ ಅವರನ್ನು ಮುಂಬೈ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದ ಗೃಹ ಸಚಿವಾಲಯದ ವಿಶೇಷ ಮೂಲ ಇದನ್ನು ವರದಿ ಮಾಡಿದ್ದು, ನೂಪುರ್ ಶರ್ಮಾ ಅವರನ್ನು ಬಂಧಿಸಲು ಮುಂಬೈ ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಪೈದೋನಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ನೂಪುರ್ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.
ಮೊದಲಿಗೆ ಸಮನ್ಸ್ ಪ್ರತಿಯನ್ನು ಇ-ಮೇಲ್ ಮೂಲಕ ನೂಪುರ್ ಶರ್ಮಾ ಅವರಿಗೆ ಕಳುಹಿಸಲಾಗಿದ್ದು, ಅವರ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮುಂಬೈ ಪೊಲೀಸರ ತಂಡ ನಿಯಮಗಳ ಪ್ರಕಾರ ಸಮನ್ಸ್ ಪೇಪರ್ ಅನ್ನು ಹಸ್ತಾಂತರಿಸಲು ದೆಹಲಿಗೆ ತಲುಪಿದೆ. ಆದರೆ ಅಲ್ಲಿ ಅವರು 4 ದಿನಗಳಿಂದ ಜಾಲಾಡಿದರೂ ನೂಪುರ್ ಅವರ ಸುಳಿವು ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ.
ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆಯ ಪರಿಣಾಮ ದೇಶಾದ್ಯಂತ ಅಶಾಂತಿಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವೂ ಒತ್ತಡದಲ್ಲಿದೆ. ಇದೀಗ ಅವರು ನಾಪತ್ತೆಯಾಗಿರುವುದು ಪೊಲೀಸರಿಗೆ ಇನ್ನೊಂದು ತಲೆನೋವಾಗಿ ಪರಿಣಮಿಸಿದೆ.