‘ಮಹಿಳೆ ಒಂದು ಕಾಮದ ವಸ್ತು’ ಬಗ್ಗೆ ಪ್ರಬಂಧ ಬರೆ | ವಿದ್ಯಾರ್ಥಿಗಳು ಪ್ರಶ್ನೆ ನೋಡಿ ಶಾಕ್ !
ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು (ಆರ್‌ಜಿಯುಎಚ್‌ಎಸ್) ಬುಧವಾರ ನಡೆಸಿದ ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ಕೋರ್ಸಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ ‘ಮಹಿಳೆ ಕಾಮೋತ್ತೇಜಕ ವಸ್ತು’ ವಿಷಯ ಕುರಿತು ಕಿರು ಪ್ರಬಂಧ ಬರೆಯಿರಿ ಅಂತ ಕೇಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ಹಾಗೂ ವಿವಾದಕ್ಕೆ ಗುರಿ ಮಾಡಿದೆ.
ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ಒಂದು ಭೋಗದ ವಸ್ತುವಾಗಿ ವಿಶ್ವವಿದ್ಯಾಲಯ ಚಿತ್ರಿಸುತ್ತಿದೆ. ವಿದ್ಯಾರ್ಥಿಗಳಿಗೂ ಇದನ್ನೇ ಬೋಧಿಸುತ್ತಿರುವುದು ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆ ಪತ್ರಿಕೆಯನ್ನು ಟ್ವೀಟ್ ಮಾಡಿ ಸಾರ್ವಜನಿಕರು ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ಅಂಕಗಳ ಪ್ರಶ್ನೆಗೆ ಬಿಎಎಂಸ್ ಕೋರ್ಸಿನ 4ನೇ ವರ್ಷದ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ‘ಕಾಯ ಚಿಕಿತ್ಸಾ: ಪತ್ರಿಕೆ-2’ರ ಪರೀಕ್ಷೆಯಲ್ಲಿ ಆಯುರ್ವೇದ ಭಾಷೆಯಲ್ಲೇ ‘ಸ್ತ್ರೀ ಆಸ್ ಎ ವಜೀಕರಣ ದ್ರವ್ಯ’ (ಕಾಮೋತ್ತೇಜಕ ವಸ್ತುವಾಗಿ ಮಹಿಳೆ) ಎಂಬ ವಿಷಯ ಕುರಿತು ಕಿರು ಪ್ರಬಂಧ ಬರೆಯಲು ಕೇಳಲಾಗಿದೆ.
ವಿವಿ ಅಧಿಕಾರಿಗಳು ಹೇಳುವುದೇನು?
ಬಿಎಎಂಎಸ್ 4ನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೇಳಿಸಿರುವ ಯಾವ ಪ್ರಶ್ನೆಯೂ ಪಠ್ಯದಿಂದ ಹೊರತಾಗಿಲ್ಲ. ಪಠ್ಯದಲ್ಲಿರುವ ಪ್ರಶ್ನೆಯನ್ನು ವಿವಿ ಕೇಳಿದೆ.
ಪಠ್ಯದಲ್ಲೇ ಮಹಿಳೆಯ ಕುರಿತು ಇರುವ ವಿಚಾರಗಳಲ್ಲಿ ಯಾವುದೇ ಲೋಪಗಳಿದ್ದರೆ ಅದನ್ನು ನಾವು ಸರಿಪಡಿಸಲಾಗುವುದಿಲ್ಲ. ಪಠ್ಯ ಬದಲಾವಣೆಯನ್ನು ವಿವಿ ಮಾಡಲಾಗುವುದಿಲ್ಲ. ಆಯುರ್ವೇದ ಆಯುಕ್ತಾಲಯವೇ ಮಾಡಬೇಕು. ಪಠ್ಯದಲ್ಲಿರುವ ಪ್ರಶ್ನೆ ಕೇಳಿರುವುದು ಬಿಟ್ಟರೆ ಮಹಿಳೆಯರಿಗೆ ಅವಹೇಳನ ಮಾಡುವ ಯಾವುದೇ ದೃಷ್ಟಿಯಿಂದ ಇಂತಹ ಪ್ರಶ್ನೆಯನ್ನು ಪ್ರಶ್ನೆಪತ್ರಿಕೆಯಲ್ಲಿ ಸೇರಿಲ್ಲ ಎಂದು ಹೇಳಿದ್ದಾರೆ.