ನೋ ಪಾರ್ಕಿಂಗ್ನಲ್ಲಿ ನಿಂತ ವಾಹನಗಳ ಚಿತ್ರವನ್ನು ಕಳುಹಿಸುವ ವ್ಯಕ್ತಿಗೆ ಬಹುಮಾನ! – ಹೊಸ ಕಾನೂನು ಜಾರಿ
ದೇಶದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿರುವಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದೇ ಹೇಳಬಹುದು. ಅದರಲ್ಲೂ ಸರಿಯಾಗಿ ಲೆಕ್ಕಹಾಕಿದರೆ ಜನರಿಗಿಂತ ಹೆಚ್ಚು ವಾಹನಗಳೇ ತುಂಬಿಹೋಗಿದೆ. ಹೀಗಾಗಿ ಪಾರ್ಕಿಂಗ್ ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದೆಷ್ಟೇ ಕಾನೂನು ಜಾರಿಗೊಳಿಸಿದರೂ ಸಿಕ್ಕ ಸಿಕ್ಕ ಜಾಗದಲ್ಲಿ ಗಾಡಿಯನ್ನು ಪಾರ್ಕ್ ಮಾಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕೇಂದ್ರ ರಸ್ತೆ ಸಾರಿಗೆ ಸಚಿವರು ಹೊಸದೊಂದು ಕಾನೂನು ಜಾರಿಗೊಳಿಸುವ ಕುರಿತು ಹೇಳಿದ್ದಾರೆ.
ನೋ ಪಾರ್ಕಿಂಗ್ನಲ್ಲಿ ನಿಂತ ವಾಹನಗಳ ಚಿತ್ರವನ್ನು ಕಳುಹಿಸುವ ವ್ಯಕ್ತಿಗೆ ಬಹುಮಾನ ನೀಡುವ ಕಾನೂನು ಶೀಘ್ರದಲ್ಲಿಯೇ ಬರಬಹುದು ಎಂದು ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ. ದಂಡದ ಮೊತ್ತ 1,000 ಆಗಿದ್ದರೆ, ಛಾಯಾಚಿತ್ರ ಕಳುಹಿಸುವವರು 500 ರೂಪಾಯಿಗಳನ್ನು ಪಡೆಯಬಹುದು ಎಂದು ಗಡ್ಕರಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆಗಳಲ್ಲಿ ತಪ್ಪಾಗಿ ವಾಹನಗಳನ್ನು ನಿಲ್ಲಿಸುವ ಅಭ್ಯಾಸವನ್ನು ನಿಲ್ಲಿಸಲು ಕಾನೂನನ್ನು ಪರಿಗಣಿಸುವುದಾಗಿ ಹೇಳಿದರು. ತಪ್ಪಾದ ಪಾರ್ಕಿಂಗ್ನಿಂದಾಗಿ ರಸ್ತೆಗಳು ಜಾಮ್ ಆಗುತ್ತಿದ್ದು, ಪ್ರಯಾಣಕ್ಕೆ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ. ರಸ್ತೆಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು, ಬೈಕ್ ನಿಲ್ಲಿಸುವ ವ್ಯಕ್ತಿಗಳ ಕುರಿತಾಗಿ ಕಾನೂನು ತರಲಿದ್ದೇನೆ. ಇಂಥ ವಾಹನಗಳು ನೋ ಪಾರ್ಕಿಂಗ್ನಲ್ಲಿ ನಿಂತಿವೆ ಎಂದು ಫೋಟೋ ತೆಗೆದು ಕಳಿಸಿದಲ್ಲಿ, ಆ ವಾಹನದ ಮಾಲೀಕನಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದರಲ್ಲಿ 500 ರೂಪಾಯಿ ಫೋಟೋ ಕಳಿಸಿದವರಿಗೆ ಸಿಗಲಿದೆ. ಹೀಗಾದಲ್ಲಿ ಖಂಡಿತವಾಗಿ ವಾಹನ ನಿಲುಗಡೆಯ ವಿಚಾರದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಟ್ರಾಫಿಕ್ ಜಾಮ್ನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ನಮ್ಮಲ್ಲಿ ಜನರು ಕಾರುಗಳನ್ನು ಖರೀದಿ ಮಾಡುತ್ತಾರೆ. ಆದರೆ, ಈ ಕಾರುಗಳಿಗಾಗಿ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡುವುದಿಲ್ಲ. ಇದರಿಂದಾಗಿ ಅವರ ವಾಹನಗಳು ರಸ್ತೆಯನ್ನು ಆಕ್ರಮಿಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.