ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿಸಿ ಮದುವೆ ಮಾಡಿಸಿದ ಹಿರಿಯರು ; ಕಾರಣ!??
ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಆಚರಣೆಯೇ ಚಾಲ್ತಿಯಲ್ಲಿದ್ದು, ಮಳೆಗಾಗಿ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ.
ರಾಜ್ಯದಲ್ಲಿ ಮಳೆಯಾಗದ ಕಾರಣ ವರುಣನ ಕೃಪೆಗಾಗಿ ಮಕ್ಕಳ ಮದುವೆ ಮಾಡಲಾಗಿದ್ದು, ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿ ಮಾಡಿ ಅವರಿಗೆ ಮದುವೆ ಶಾಸ್ತ್ರ ಮಾಡುವ ರೂಢಿ ಇದಾಗಿದೆ. ಇಬ್ಬರು ಹೆಣ್ಣುಮಕ್ಕಳಲ್ಲಿ ಓರ್ವಳಿಗೆ ಗಂಡು ವೇಷ ಹಾಕಿ ಮದುವೆ ಮಾಡುವ ಸಂಪ್ರದಾಯವಾಗಿದ್ದು, ಮಾಮೂಲಿ ಮದುವೆಯಂತೆಯೇ ಹೆಣ್ಣು-ಗಂಡಿಗೆ ಅರಿಷಿಣ ಶಾಸ್ತ್ರ, ಮಾಂಗಲ್ಯ ಧಾರಣಾ ಸೇರಿದಂತೆ ಮದುವೆ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ.
ಮನೆಯ ಮುಂದೆ ಮಂಟಪ ಹಾಕಿಸಿ, ಹಾರ ಬದಲಾಯಿಸಿ, ಮಾಂಗಲ್ಯ ಧಾರಣಾ ಕಾರ್ಯಕ್ರಮವನ್ನು ನಡೆಸಲಾಗಿದೆ. ಅಷ್ಟೇ ಅಲ್ಲದೆ ಮದುವೆಗೆ ಆಗಮಿಸಿದ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಹಿರಿಯರೆಲ್ಲರು ಸೇರಿ ಸಂಪ್ರದಾಯದಂತೆ ಮಕ್ಕಳ ಮದುವೆ ಮಾಡಿದ್ದು, ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.