ಕೊಡಗಿನಲ್ಲಿ ದೈವದ ಜತೆ ಕುಣಿಯುವುದು ಕಟ್ಟುಕಟ್ಟಲೆ -ದೈವಾರಾಧಕರ ಪತ್ರಿಕಾಗೋಷ್ಠಿ

ಸುಳ್ಯ: ದೈವದ ಆಚಾರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಬದಲಾವಣೆಗಳಿರುತ್ತವೆ. ಪುತ್ತೂರು, ಸುಳ್ಯ, ಕೊಡಗಿನಲ್ಲಿ ಮಾಡುವ ಆಚರಣೆ ಹಾಗೂ ಹೊರ ಭಾಗದ ಆಚರಣೆಗೂ ವ್ಯತ್ಯಾಸಗಳಿವೆ. ಅದನ್ನು ಸರಿ ಎಂಬ ವಾದವೂ ನಮ್ಮದಲ್ಲ. ಕೊಡಗಿನಲ್ಲಿ ದೈವದ ನೇಮದಲ್ಲಿ ಕೆಲವು ದೈವದ ಜತೆಯಲ್ಲಿ ಕುಣಿಯುವುದು ಅಲ್ಲಿನ ಕಟ್ಟುಕಟ್ಟಲೆ ಎಂದು ದೈವದ ಮದ್ಯಸ್ಥ, ಸಂಶೋಧಕ ಅಜಿತ್ ಗೌಡ ಐವರ್ನಾಡು ತಿಳಿಸಿದರು.

 

ಅವರು ಶುಕ್ರವಾರ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಚಾರ ಪ್ರಸ್ತಾಪಿಸಿದರು. ಇತ್ತೀಚೆಗೆ ಕೊಡಗಿನಲ್ಲಿ ದೈವದ ಜತೆ ಜನರು ಕುಣಿದಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅದಕ್ಕೆ ಮಂಗಳೂರು ಭಾಗದಲ್ಲಿ ನಡೆದ ಚರ್ಚೆಯಲ್ಲಿ ವಿಚಾರ ಪ್ರಸ್ತಾಪಗೊಂಡು ಕುಣಿದಿರುವುದು ತಪ್ಪು ಎಂಬ ಕಲ್ಪನೆಯಲ್ಲಿ ಮಾತನಾಡಲಾಗಿದೆ ಎಂದು ತಿಳಿಸಿದ ಅವರು ದೈವದ ಜತೆ ಕುಣಿಯುವುದು ಕೊಡಗಿನಲ್ಲಿ ಕಟ್ಟುಕಟ್ಟಲೆಯಾಗಿದ್ದು, ಜನರು ತಮ್ಮ ಸಂತೋಷದ ಸಮಯದಲ್ಲಿ, ಹರಕೆ ರೂಪದಲ್ಲಿ ಅಥವಾ ಈ ಹಿಂದೆ ನಡೆದುಕೊಂಡು ಬಂದ ಪದ್ಧತಿಯಂತೆ ದೈವದ ಜತೆ ಕುಣಿಯುತ್ತಾರೆ. ಆ ಪದ್ಧತಿ ಈ ಭಾಗದಲ್ಲಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ಈ ಭಾಗದ ದೈವ ನರ್ತಕರ ಅಥವಾ ದೈವರಾಧಕರ ಯಾವುದೇ ಹೇಳಿಕೆ, ಮಾಹಿತಿ ಪಡೆಯದೇ ತಪ್ಪು ಎಂಬಂತೆ ಬಿಂಬಿಸಿರುವುದು ಸರಿಯಲ್ಲ ಎಂದು ಅಜಿತ್ ಐವರ್ನಾಡು ತಿಳಿಸಿದರು.

ಪೂರ್ವಜರ ಪ್ರಕಾರ ಕುಣಿಯುವುದು ನಮ್ಮಲ್ಲಿರುವ ನೋವನ್ನು ಹೊರ ಹಾಕಲು, ಖುಷಿಯನ್ನು ಹೊರಹಾಕಲು ಇರುವ ಮಾಧ್ಯಮ ತುಳುನಾಡಿನಲ್ಲೂ ಕುಲೆನಲಿಕೆ ಎಂಬುದು ಇದೆ ಎಂದರು.

ಕೊಡಗು ಪ್ರದೇಶದಲ್ಲಿ ದೈವಾರಾಧನೆಯಲ್ಲಿ ಈಗಲೂ ಹಿಂದಿನ ಪದ್ಧತಿಯನ್ನೇ ಆಚರಿಸಿಕೊಂಡು ಬರಲಾಗುತ್ತಿದೆ. ದೈವರಾಧನೆಯಲ್ಲಿ ತಾಯಿ ಮತ್ತು ಮಗನ ಸಂಬಂಧ ಅಲ್ಲಿದೆ. ತಾಯಿ ಬಂದ ವೇಳೆ ಎದ್ದುನಿಂತು ಮಗ ಕುಣಿಯುವುದು ಅಲ್ಲಿದೆ. ಅನಾರೋಗ್ಯ, ನನ್ನ ಕೈಕಾಲು ಸರಿಯಾದರೇ ನಾನು ದೈವದ ಜತೆ ಕುಣಿಯುತ್ತೇನೆ ಎಂಬ ಹರಕೆ, ವಾಡಿಕೆ ಇದು ಎಂದರು. ಈ ರೀತಿ ಮಾಡುವುದು ದೈವಕ್ಕೆ ಮಾಡುವ ಅವಹೇಳನ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೈವದ ಜತೆ ಮಹಿಳೆಯರು ಕುಣಿಯುವ ವಿಡಿಯೋ ವೈರಲ್ ಮಾಡಲಾಗಿದ್ದು ಮೊದಲನೆಯದಾಗಿ ಸರಿಯಲ್ಲ. ಇದನ್ನು ಸಂಬಂಧಿಸಿದವರು ತಿಳಿದುಕೊಳ್ಳಬೇಕು. ಅಲ್ಲಿನ ಸಂಪ್ರದಾಯದಂತೆ ಕುಣಿಯಲಾಗಿದೆ. ಈ ಬಗ್ಗೆ ತಪ್ಪು ಕಲ್ಪನೆ ಮೂಡಿಸುವುದು ನಿಲ್ಲಲಿ ಎಂದು ದೈವ ನರ್ತಕ ಮೋನಪ್ಪ ಮಾಡವು ತಿಳಿಸಿದರು.

ಏನಿದು ಘಟನೆ ?
ಕೊಡಗಿನ ಮಾರ್ನಾಡು ಎಂಬಲ್ಲಿ ನಡೆದ ಶಿರಾಡಿ ದೈವದ ನೇಮದಲ್ಲಿ ದೈವದ ಜತೆ ಮಹಿಳೆಯರು, ಮಕ್ಕಳು ಕುಣಿಯುವ ವಿಡಿಯೋವೊಂದು ವೈರಲ್ ಆಗಿತ್ತು. ಇದಕ್ಕೆ ಮಂಗಳೂರು ಭಾಗದಲ್ಲಿ ವಿರೋಧದ ಮಾತು ಕೇಳಿ ಬಂದಿತ್ತು ಎನ್ನಲಾಗಿದೆ. ಅಲ್ಲದೆ ಚಾನೆಲ್ ವೊಂದರಲ್ಲಿ ನಡೆದ ಚರ್ಚಾಕೂಟದಲ್ಲಿಯೂ ಕುಣಿದಿರುವುದು ತಪ್ಪು ಎಂದು ಬಿಂಬಿಸಲಾಗಿದೆ. ವೈರಲ್ ವಿಡಿಯೋದಲ್ಲಿ ನರ್ತನ ಸೇವೆ ಮಾಡಿರುವ ವ್ಯಕ್ತಿ ಈ ಭಾಗದವರಾಗಿದ್ದರು. ಕೊಡಗಿನ ಸಂಪ್ರದಾಯದಂತೆ ದೈವದ ಜತೆ ಅಲ್ಲಿನ ಜನ ಕುಣಿದಿದ್ದಾರೆ ಎಂದು ಅಜಿತ್ ಐವರ್ನಾಡು ತಿಳಿಸಿದರು.

ದೈವನರ್ತಕರಾದ ಕುಂಞ ಅಜಲ ಬೊಳಿಯಮಜಲು, ಮೋನಪ್ಪ ಅಜಲ ಮಾಡವು, ಶ್ರೀಧರ ಅಜಲ ಮೈತಡ್ಕ, ಉಮೆಶ್ ಬೊಳಿಯಮಜಲು, ಅಜಿತ್ ಐವರ್ನಾಡು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.