ಮಂಗಳೂರು : ಅಡಿಕೆ ಧಾರಣೆ, ಆಮದು ಸುಂಕ ಹೆಚ್ಚಳಕ್ಕೆ ಬೆಳೆಗಾರರ ಆಗ್ರಹ!
ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಹೊಸ ಅಡಿಕೆ ಧಾರಣೆಯಲ್ಲಿ ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದಿದೆ. ಏಕಾಏಕಿ ಧಾರಣೆ ಕುಸಿತ ಆಗಿರುವುದರಿಂದ ಬೆಳೆಗಾರರಿಗೆ ನಷ್ಟದ ಭೀತಿ ಉಂಟಾಗಿತ್ತು. ಅಡಿಕೆ ಸುಲಿದು ಮಾರಾಟ ಮಾಡುವ ಸಂದರ್ಭದಲ್ಲಿ ಈ ರೀತಿ ಆಗಿದ್ದು ಕೊಂಚ ಭಯ ಮೂಡಿಸಿದ್ದಂತು ಸುಳ್ಳಲ್ಲ.
ಆದರೆ ಇದೀಗ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು ಇನ್ನಷ್ಟು ಹೆಚ್ಚಳದ ನಿರೀಕ್ಷೆ ಮೂಡಿಸಿದೆ.
ಹೊರ ಮಾರುಕಟ್ಟೆಯಲ್ಲಿ ಮೇಯಲ್ಲಿ 435-440 ರೂ. ತನಕ ಇದ್ದ ಧಾರಣೆ ಜೂನ್ ಮೊದಲ ವಾರದಲ್ಲಿ 400 ರೂ.ಗಿಂತ ಕೆಳಗೆ ಇಳಿದಿತ್ತು. ಅಂದರೆ 40 ರೂಗಳಷ್ಟು ಇಳಿಕೆ ಕಂಡಿತ್ತು. ಜೂ. 14ರಂದು ಹೊಸ ಅಡಿಕೆ ಧಾರಣೆ 410 ರೂ. ಇದ್ದರೆ, ಜೂ. 15ರಂದು 415 ರೂ. ತನಕ ಏರಿಕೆ ಕಂಡಿದೆ. ಹಳೆ ಅಡಿಕೆ ಧಾರಣೆಯು ಇಳಿಕೆ ಕಾಣದೆ ಮೊದಲಿನಂತೆ ಸ್ಥಿರವಾಗಿತ್ತು.
ಶ್ರೀಲಂಕಾ, ಮ್ಯಾನ್ಮಾರ್, ಬರ್ಮ ಮತ್ತಿತರ ದೇಶಗಳಿಂದ ಅಡಿಕೆ ಆಮದಾಗುವ ಕಾರಣ ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆ ಕಡಿಮೆ ಆಗಿರುವುದು ದರ ಕುಸಿಯಲು ಕಾರಣವಾಗಿದೆ. ಆದುದರಿಂದ ಕೇಂದ್ರ ಸರಕಾರ ಆಮದು ಸುಂಕ ಹೆಚ್ಚಿಸಿ ವಿದೇಶದಿಂದ ಅಡಿಕೆ ಬರುವುದಕ್ಕೆ ಕಡಿವಾಣ ಹಾಕಿದರೆ ಅಡಿಕೆಗೆ ಬೇಡಿಕೆ ಹೆಚ್ಚಳಗೊಂಡು ಧಾರಣೆ 450 ರೂ. ದಾಟಬಹುದು ಎನ್ನುತ್ತಾರೆ ಹೊರ ಮಾರುಕಟ್ಟೆಯ ವರ್ತಕರು.
ಉತ್ತರ ಭಾರತದ ವ್ಯಾಪಾರಿಗಳು ಕರಾವಳಿ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದ್ದಾರೆ. ಏಕೆಂದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ಉತ್ತರ ಭಾರತದಲ್ಲಿ ಅತೀ ಹೆಚ್ಚು ಉಷ್ಣತೆ ಇರುವುದರಿಂದ ಕರಾವಳಿ ಭಾಗದ ಅಡಿಕೆಯ ಬೇಡಿಕೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಮುಂದಿನ ಕೆಲವು
ದಿನಗಳಲ್ಲಿ ಸಮಸ್ಯೆ ಪರಿಹಾರದ ನಿರೀಕ್ಷೆಯಿದೆ ಎನ್ನುವುದು ಕ್ಯಾಂಪ್ಕೋ ಸಂಸ್ಥೆ ನೀಡುವ ಉತ್ತರ.
ಕ್ಯಾಂಪ್ಕೋ ಸಂಸ್ಥೆಯು ಪ್ರತೀ ದಿನ ನೀಡುವ ಅಡಿಕೆ ಧಾರಣೆ ಪಟ್ಟಿಗೂ ಅಡಿಕೆ ಖರೀದಿ ವೇಳೆ ಬೆಳೆಗಾರರಿಗೆ ನೀಡುತ್ತಿರುವ ಧಾರಣೆಗೆ ವ್ಯತ್ಯಾಸ ಇದೆ ಅನ್ನುತ್ತಾರೆ ಬೆಳೆಗಾರರು. ಹೊರ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ 400-410 ರೂ. ಆಸುಪಾಸಿನಲ್ಲಿದೆ. ಅದಾಗ್ಯೂ ಕ್ಯಾಂಪ್ಕೋ ನೀಡುವ ಮಾರುಕಟ್ಟೆ ಧಾರಣೆಯ ಪ್ರಕಾರ ಜೂ. 15ರಂದು ಹೊಸ ಅಡಿಕೆಗೆ 375 ರಿಂದ 450 ರೂ. ಎಂದಿದೆ.
ಕಳೆದ ಒಂದು ವಾರದಿಂದಲು ಪಟ್ಟಿಯಲ್ಲಿ ಇದೇ ಧಾರಣೆ ಇದೆ. ಆದರೆ ಬೆಳೆಗಾರರು ಕ್ಯಾಂಪ್ಕೋದಲ್ಲಿ ಅಡಿಕೆ ಮಾರಾಟ ಮಾಡಿದರೆ 410 ರೂ.ಗಿಂತ ಹೆಚ್ಚು ದೊರೆಯುತ್ತಿಲ್ಲ ಎಂಬ ದೂರು ಬೆಳೆಗಾರರಿಂದ ಕೇಳಿ ಬಂದಿದೆ.