ಇಡೀ ವಿಶ್ವವೇ ಮುಸ್ಲಿಮರ ಬಳಿ ಕ್ಷಮೆ ಕೇಳಬೇಕಂತೆ !! | ಸರ್ಕಾರಿ ವೆಬ್ ಸೈಟ್ ಸೇರಿದಂತೆ 500 ಕ್ಕೂ ಹೆಚ್ಚು ವೆಬ್ ಸೈಟ್ ಗಳು ಹ್ಯಾಕ್
ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ವಿರುದ್ಧದ ಪ್ರತಿಭಟನೆಯ ಗದ್ದಲದ ನಡುವೆಯೇ ಮಹಾರಾಷ್ಟ್ರದ ಥಾಣೆ ನಗರ ಪೊಲೀಸ್ ಕಮಿಷನರೇಟ್ ಸೇರಿಂತೆ 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಮಂಗಳವಾರ ಹ್ಯಾಕ್ ಆಗಿವೆ.
ಕಮಿಷನರೇಟ್‌ನ ಹ್ಯಾಕ್ ಆದ ವೆಬ್‌ಸೈಟ್‌ನಲ್ಲಿ ಸಂದೇಶವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಜಗತ್ತಿನಾದ್ಯಂತ ಮುಸ್ಲಿಮರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶವನ್ನು ಭಾರತ ಸರ್ಕಾರಕ್ಕೆ ನಿರ್ದೇಶಿಸಿರುವಂತಿದೆ.
ಘಟನೆ ಬಳಿಕ ಮಹಾರಾಷ್ಟ್ರದ ಸೈಬರ್ ಸೆಲ್ ಹ್ಯಾಕ್ ಆಗಿರುವ ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳನ್ನು ಸರಿಪಡಿಸುವಂತೆ ಆದೇಶಿಸಿದೆ ಹಾಗೂ ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ, 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. 70ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಅವುಗಳಲ್ಲಿ 3 ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಸೇರಿವೆ. ನಾವು ಈಗಾಗಲೇ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಿದ್ದೇವೆ, ಇನ್ನೂ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಇದೀಗ ಎಲ್ಲೆಡೆ ಉದ್ವಿಗ್ನತೆ ಎದ್ದಿದ್ದು, ಇದರ ಬೆನ್ನಲ್ಲೇ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಈ ಗದ್ದಲಕ್ಕೂ ಸೈಬರ್ ಹ್ಯಾಕ್‌ಗೂ ಸಂಬಂಧ ಇರುವಂತೆ ತೋರುತ್ತದೆ. ಭಾರತದಲ್ಲಿ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹ್ಯಾಕರ್ಸ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ತಮ್ಮ ಸ್ಥಾನದಿಂದ ಅಮಾನತಾಗಿದ್ದರು. ಅವರ ಹೇಳಿಕೆಯಿಂದ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರಿಯಾಗಿ ಪ್ರತಿಭಟನೆಗಳನ್ನು ಮಾಡಲಾಗಿತ್ತು.