ಮದ್ಯದಂಗಡಿಗೆ ಸಗಣಿ ಎರಚಿದ ಬಿಜೆಪಿ ನಾಯಕಿ ಉಮಾ ಭಾರತಿ !!- ವೀಡಿಯೋ ವೈರಲ್

ಮತ್ತೆ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಸುದ್ದಿಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿ ಮದ್ಯದ ಅಂಗಡಿಯೊಂದಕ್ಕೆ ಹಸುವಿನ ಸಗಣಿ ಎಸೆದು, ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ ಘಟನೆ ನಡೆದಿದೆ.

 

ರಾಜ್ಯ ರಾಜಧಾನಿ ಭೋಪಾಲ್‌ನಿಂದ 330 ಕಿ.ಮೀ ದೂರದಲ್ಲಿರುವ ರಾಮರಾಜ ಮಂದಿರಕ್ಕೆ ಹೆಸರುವಾಸಿಯಾದ ಧಾರ್ಮಿಕ ಪಟ್ಟಣವಾದ ಓರ್ಚಾದಲ್ಲಿ ಉಮಾ ಭಾರತಿ ಅವರು ಮದ್ಯದಂಗಡಿಗೆ ಹಸುವಿನ ಸಗಣಿ ಎಸೆದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಘಟನೆಯ ನಂತರ ಟ್ವೀಟ್ ಮಾಡಿದ ಉಮಾಭಾರತಿ, ಮದ್ಯದಂಗಡಿ ನಡೆಸಲು ಅನುಮತಿ ನೀಡುವುದು ಸರಿಯಲ್ಲ. ಪವಿತ್ರ ಪಟ್ಟಣವಾದ ಓರ್ಚಾದಲ್ಲಿ ಮದ್ಯದಂಗಡಿ ತೆರೆಯುವುದು ಅಪರಾಧ ಎಂದು ಹೇಳಿದ್ದಾರೆ. ಆದರೆ, ಅಂಗಡಿ ಮಂಜೂರಾದ ಸ್ಥಳದಲ್ಲಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೋದಲ್ಲಿ ಉಮಾ ಭಾರತಿ ಅವರು, ನೋಡಿ ನಾನು ಗೋವಿನ ಸಗಣಿ ಎಸೆದಿದ್ದೇನೆ. ಕಲ್ಲು ತೂರಾಟ ನಡೆಸಿಲ್ಲ ಎಂದು ಹೇಳಿರುವುದು ರೆಕಾರ್ಡ್ ಆಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಉಮಾ ಭಾರತಿ ಅವರು ಭೋಪಾಲ್‌ನಲ್ಲಿ ಮದ್ಯದ ಅಂಗಡಿಯೊಂದಕ್ಕೆ ಕಲ್ಲು ತೂರಿದ್ದರು. ಆ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Leave A Reply

Your email address will not be published.