ಧರ್ಮಸ್ಥಳ: ಬೆಳ್ಳಂಬೆಳಗ್ಗೆ ನಡೆದ ಘಟನೆ!! ರಸ್ತೆಗೆ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ-ಸವಾರ ಹೋಟೆಲ್ ಮಾಲೀಕ ಸ್ಥಳದಲ್ಲೇ ಸಾವು

ಧರ್ಮಸ್ಥಳ:ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹೋಟೆಲ್ ಒಂದರ ಮಾಲೀಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜೂನ್ 15 ರ ಮುಂಜಾನೆ ಧರ್ಮಸ್ಥಳ ನೇತ್ರಾವತಿ ಬಳಿಯ ಅಡ್ಯಾಲ ಚಡವು ಎಂಬಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಓಡಿಲ್ನಾಲದ ಮುಗುಳಿಚರ್ತ ನಿವಾಸಿ, ಕನ್ಯಾಡಿ ಬಳಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ನೇಮಿರಾಜ್ ಬುಣ್ಣು(42)ಎಂದು ಗುರುತಿಸಲಾಗಿದೆ. ಇಂದು ನಸುಕಿನ ವೇಳೆ ಹೋಟೆಲ್ ತೆರೆಯಲು ಮನೆಯಿಂದ ಹೊರಟು ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ನೇತ್ರಾವತಿ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಈ ಮೊದಲು ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿಯಾಗಿದ್ದು, ಆ ಬಳಿಕ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply