ಫ್ರೂಟಿ, ಟ್ರೋಪಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್‌ಗೆ ಜುಲೈ 1ರಿಂದ ನಿಷೇಧ?!!! ಯಾಕೆ ? ಇಲ್ಲಿದೆ ಮಾಹಿತಿ
ಮುಂದಿನ ತಿಂಗಳು ಅಂದರೆ ಜುಲೈ 1 ರಿಂದ ಏಕ ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ನಿರ್ಧಾರದಿಂದಾಗಿ ಪ್ರೂಟಿ, ಆ್ಯಪಿ (Appy), ರಿಯಲ್, ಟ್ರೋಪಿಕಾನಾ ಮತ್ತು ಮಾಜಾದಂತಹ ತಂಪಾದ ಪಾನೀಯಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಬಹುದು. ಈ ಹಿಂದೆ, ಫ್ರೂಟಿ ಮತ್ತು ಆ್ಯಪಿ ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸುವ ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯ ಮಾಡಿತ್ತು. ಸದ್ಯಕ್ಕೆ ಪ್ಲಾಸ್ಟಿಕ್ ಸ್ಟ್ರಾ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮೇಲಿನ ಸರ್ಕಾರದ ನಿಷೇಧವನ್ನು 2022ರ ಜುಲೈ 1ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ತರಾತುರಿ ನಿಷೇಧ’ ಎಂದು ಕರೆದಿರುವ ಪಾರ್ಲೆ ಆಗ್ರೋ ಇದು ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ) ಎಂದಿದೆ. ಒಟ್ಟಾರೆ ವ್ಯವಹಾರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ಲಾಸ್ಟಿಕ್ ಸ್ಟ್ರಾಗಳ ಬಳಕೆಯ ಮೇಲಿನ ಕೇಂದ್ರ ಸರ್ಕಾರದ ನೇತೃತ್ವದ ನಿಷೇಧವನ್ನು ಪಾರ್ಲೆ ಆಗ್ರೋ ಅನುಮೋದಿಸಿದರೂ ತಡೆಯಾಜ್ಞೆಯ ಅನುಷ್ಠಾನವನ್ನು 6 ತಿಂಗಳವರೆಗೆ ಮುಂದೂಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಮುಂದೂಡುವಂತೆ ಅಮುಲ್ ಸಂಸ್ಥೆ ಕೂಡ ಪರಿಸರ ಸಚಿವಾಲಯವನ್ನು ಒತ್ತಾಯಿಸಿತ್ತು. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಪರ್ ಸ್ಟ್ರಾಗಳ ಸಮರ್ಪಕ ಲಭ್ಯತೆಯ ಕೊರತೆಯಿಂದಾಗಿ ಪ್ಲಾಸ್ಟಿಕ್ ಸ್ಟ್ರಾಗಳ ಮೇಲೆ ವಿಧಿಸಿರುವ ನಿಷೇಧವನ್ನು ಒಂದು ವರ್ಷಕ್ಕೆ ಮುಂದೂಡುವಂತೆ ಪ್ರಮುಖ ಡೈರಿ ಸಂಸ್ಥೆಯಾದ ಅಮುಲ್ ಪರಿಸರ ಸಚಿವಾಲಯವನ್ನು ಒತ್ತಾಯ ಮಾಡಿತ್ತು.
ಸಿಂಗಲ್ ಯೂಸ್‌ನ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧದ ಕುರಿತು ನಾವು ಪರಿಸರ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಎಂಡಿ ಆರ್.ಎಸ್. ಸೋಧಿ ಕಳೆದ ತಿಂಗಳು ಹೇಳಿದ್ದರು. GCMMF ತನ್ನ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ನಮ್ಮ ಮಜ್ಜಿಗೆ ಮತ್ತು ಲಸ್ಸಿಯಲ್ಲಿರುವ ಪ್ಲಾಸ್ಟಿಕ್ ಸ್ಟ್ರಾವನ್ನು ಟೆಟ್ರಾ ಪ್ಯಾಕ್ ಗೆ ಜೋಡಿಸಲಾಗಿದೆ. ಇದು ಪ್ರಾಥಮಿಕ ಪ್ಯಾಕೇಜಿಂಗ್‌ನ ಭಾಗವಾಗಿದೆ. ಹಾಗಾಗಿ, ಇದನ್ನು ವಿಸ್ತೃತ ಉತ್ಪಾದಕರ ಜವಾಬ್ದಾರಿ (ಇಪಿಆರ್) ಮತ್ತು ಮರುಬಳಕೆಯ ಭಾಗವಾಗಿ ಸೇರಿಸಲು ಪರಿಸರ ಸಚಿವಾಲಯವನ್ನು ಒತ್ತಾಯ ಮಾಡಲಾಗಿದೆ ಎಂದು ಸೋಧಿ ಹೇಳಿದ್ದರು.