ಪ್ರಯಾಗ್‌ರಾಜ್‌ ಹಿಂಸಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !! | ಮಾಸ್ಟರ್ ಮೈಂಡ್ ಜಾವೇದ್ ಪುತ್ರಿ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಮೊಹಮ್ಮದ್ ಜಾವೇದ್ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಮಾಸ್ಟರ್ ಮೈಂಡ್ ಮೊಹಮ್ಮದ್ ಜಾವೇದ್ ವಿರುದ್ಧ ಯೋಗಿ ಸರ್ಕಾರ ಕಠಿಣ ಕ್ರಮ ಕೈಗೊಂಡು ನಿರಂತರವಾಗಿ ತನಿಖೆ ನಡೆಸುತ್ತಿದ್ದು, ಇದೀಗ ಜಾವೇದ್ ಪುತ್ರಿ ಅಫ್ರೀನ್ ಫಾತಿಮಾ ಬಗ್ಗೆ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.

 

ತನಿಖೆಯ ವೇಳೆ ಅಫ್ರೀನ್ ಫಾತಿಮಾಗೆ ಇದ್ದ ಶಾಹೀನ್ ಬಾಗ್ ಸಂಪರ್ಕವು ಮುನ್ನೆಲೆಗೆ ಬಂದಿದೆ. ಜೆಎನ್‌ಯುನಲ್ಲಿ ಭಯೋತ್ಪಾದಕ ಅಫ್ಜಲ್ ಗುರುವನ್ನು ಬೆಂಬಲಿಸಿ ಘೋಷಣೆಗಳನ್ನು ಎತ್ತಿದ ಮತ್ತು ವಕಾಲತ್ತು ವಹಿಸಿದ ಆರೋಪ ಈಕೆಯ ಮೇಲಿದೆ. ಫಾತಿಮಾ ಕೂಡ ಶಾರ್ಜೀಲ್ ಇಮಾಮ್ ಜೊತೆ ಸಂಪರ್ಕದಲ್ಲಿದ್ದಳು ಎಂದು ಸಹ ತಿಳಿದುಬಂದಿದೆ. ಫಾತಿಮಾ ಬಗ್ಗೆ ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಇದೀಗ ಪೊಲೀಸರು ಆಕೆಯ ಹಳೆಯ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಮದರಸಾದ ವಿದ್ಯಾರ್ಥಿಗಳು ಸಹ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ವಿದ್ಯಾರ್ಥಿಗಳು ಖುಲ್ದಾಬಾದ್‌ನಲ್ಲಿರುವ ದಾರುಲ್ ಉಲೂಮ್ ಮದರಸಾ ಗರೀಬ್ ನವಾಜ್‌ಗೆ ಸೇರಿದವರು. ಪೊಲೀಸರ ತನಿಖೆಯಲ್ಲಿ ಮುಖಕ್ಕೆ ಮಾಸ್ಕ್, ರುಮಾಲು ಹಾಕಿಕೊಂಡು ಕಲ್ಲು ತೂರಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆ ವ್ಯಕ್ತಿಗಳು ಯಾರು, ಯಾರ ಒತ್ತಾಯದ ಮೇರೆಗೆ ಅವರು ಮದರಸಾದಿಂದ ಹೊರಬಂದು ಕಲ್ಲು ತೂರಾಟದಲ್ಲಿ ತೊಡಗಿದ್ದರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಈವರೆಗೆ 255 ಮಂದಿ ಬಂಧನ:

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 255 ಜನರನ್ನು ಬಂಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮಾತನಾಡಿ, ಈ ಸಂಬಂಧ ರಾಜ್ಯದಲ್ಲಿ 255 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಫಿರೋಜಾಬಾದ್‌ನಲ್ಲಿ 13, ಅಂಬೇಡ್ಕರ್ ನಗರದಲ್ಲಿ 28, ಮೊರಾದಾಬಾದ್‌ನಲ್ಲಿ 27, ಸಹರಾನ್‌ಪುರದಲ್ಲಿ 64, ಪ್ರಯಾಗ್‌ರಾಜ್‌ನಲ್ಲಿ 68, ಹತ್ರಾಸ್ನಲ್ಲಿ 50, ಅಲಿಗಢದಲ್ಲಿ 3, ಜಲೌನ್‌ನಲ್ಲಿ 2 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಈ ಹಿಂದೆ ರಾಜ್ಯದ ವಿವಿಧ ನಗರಗಳಲ್ಲಿ ವಾತಾವರಣವನ್ನು ಹಾಳುಮಾಡುವ ಪ್ರಯತ್ನಗಳಲ್ಲಿ ತೊಡಗಿರುವ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸುಸಂಸ್ಕೃತ ಸಮಾಜದಲ್ಲಿ ಇಂತಹ ಸಮಾಜ ವಿರೋಧಿಗಳಿಗೆ ಜಾಗವಿಲ್ಲ. ಯಾವುದೇ ಅಮಾಯಕರು ಕಿರುಕುಳಕ್ಕೊಳಗಾಗುವುದಿಲ್ಲ. ಹಾಗೆಯೇ ಒಬ್ಬ ತಪ್ಪಿತಸ್ಥರೂ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

Leave A Reply

Your email address will not be published.