ಪಾರ್ಶ್ವವಾಯುವಿಗೆ ತುತ್ತಾದ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್
ವಿಶ್ವವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಗಂಭೀರವಾದ ಖಾಯಿಲೆಗೆ ತುತ್ತಾಗಿದ್ದಾರೆ. ಬೈಬರ್ ಅವರು ಮುಖದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ‘ಬೇಬಿ’, ಪೀಚಸ್, ಸ್ಟೇಯ್, ಮುಂತಾದ ಹಾಡುಗಳ ಮೂಲಕ ಪ್ರಸಿದ್ಧವಾಗಿದ್ದ ಕೆನೆಡಿಯನ್ ಸಿಂಗರ್ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ತಾನು ರಾಮ್ಸೆ ಹಂಟ್ ಸಿಂಡ್ರೋಮ್ ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅವರ ಮುಖದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ. ಮೇಯೊ ಕ್ಲಿನಿಕ್ ಪ್ರಕಾರ, ರಾಮ್ಸೆ ಹಂಟ್ ಸಿಂಡ್ರೋಮ್ ಮುಖದ ನರಗಳ ಮೇಲೆ ದಾಳಿ ಮಾಡುತ್ತದೆ ಎನ್ನಲಾಗಿದ್ದು ಸಿಡುಬು (ಚಿಕನ್ ಫಾಕ್ಸ್) ರೋಗಕ್ಕೆ ಕಾರಣವಾಗುವ ವೈರಸ್ ನಿಂದಲೇ ಈ ರೋಗವೂ ಉಂಟಾಗುತ್ತದೆ ಎನ್ನಲಾಗಿದೆ.
ಟೊರೊಂಟೊ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಿದ ನಂತರ ಜಸ್ಟಿನ್ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ತಮ್ಮ ಮುಖದ ಒಂದು ಬದಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನ ಹೇಳಿದ್ದಾರೆ. “ನಾನು ನಿಮ್ಮೆಲ್ಲರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ನನಗೆ ನಿಮ್ಮ ಪ್ರಾರ್ಥನೆಗಳು ಬೇಕು.” ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.