ಉತ್ತರ ಪ್ರದೇಶದಲ್ಲಿ ರಸ್ತೆಗೆ ಇಳಿದು ಭೋರಿಡುತ್ತಿರುವ ಬುಲ್ಡೋಜರ್ | ನಿನ್ನೆ ಗಲಭೆಗೆ ಕಾರಣ ಆದವನ ಕಟ್ಟಡ ಧ್ವಂಸ ಕಾರ್ಯ ಇವತ್ತೇ ಶುರು
ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದ ವಾರದ ನಂತರ, ಇಂದು ನಗರದ ಬೀದಿಗಳಲ್ಲಿ ಬುಲ್ಡೋಜರ್‌ಗಳು ಪರೇಡ್ ನಡೆಸಿವೆ. ದೊಡ್ಡದಾಗಿ ಸದ್ದು ಮಾಡುತ್ತಾ ಧೂಳೆಬ್ಬಿಸುತ್ತಿರುವ ಹಿಟಾಚಿ-ಜೆಸಿಬಿಗಳು ದುಷ್ಕರ್ಮಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಬುಲ್ಡೋಜರ್ ಮಾಡುತ್ತಿವೆ.
ನಿನ್ನೆ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಸ್ಥಳೀಯ ಮುಸ್ಲಿಂ ಮುಖಂಡ ಜಾಫರ್ ಹಯಾತ್ ಹಶ್ಮಿ ಎನ್ನಲಾಗಿದೆ. ಇದೀಗ ಬುಲ್ಡೋಜರ್‌ಗಳು ಜಾಫರ್ ಹಯಾತ್ ಹಶ್ಮಿ ಅವರ ನಿವಾಸದ ಬಾಗಿಲನ್ನು ಕೆಡವಲು ತಲುಪಿವೆ. ಡೆಮಾಲಿಷನ್ ಡ್ರೈವ್ ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸರು ಮತ್ತು ಸಕಲ ಆಡಳಿತ ಯಂತ್ರವೇ ಬೀಡು ಬಿಟ್ಟಿವೆ.
ಜೂನ್ 3 ರಂದು ಕಾನ್ಪುರದಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಮುಸ್ಲಿಂ ಸಂಘಟನೆಯೊಂದು ನಗರದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಪರೇಡ್ ಮಾರ್ಕೆಟ್‌ನಲ್ಲಿ ಅಂಗಡಿಗಳನ್ನು ಮುಚ್ಚಲು ಕರೆ ನೀಡಿದ ನಂತರ ಹಿಂಸಾತ್ಮಕ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದಿದ್ದವು. ಡಿಸಿಪಿ ಸಂಜೀವ್ ತ್ಯಾಗಿ ನೇತೃತ್ವದ ಎಂಟು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಬಗ್ಗೆ ಕ್ಷಿಪ್ರ ತನಿಖೆ ನಡೆಸುತ್ತಿದೆ. ಉತ್ತರ ಪ್ರದೇಶದ ಎಂಎಲ್‌ಸಿ ಮತ್ತು ಬಿಜೆಪಿ ನಾಯಕರೂ ಆಗಿರುವ ಮೊಹ್ಸಿನ್ ರಾಜಾ ಅವರು, ಅಲ್ಲಿ ನಡೆದಿದ್ದ ಘರ್ಷಣೆಗಳು ಪೂರ್ವ ಯೋಜಿತ ಎಂದು ಹೇಳಿದ್ದಾರೆ.