ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆಯೇ ಭಾರೀ ಸಂಚು !!? | ದೇಶದಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯಲು ಕುಮ್ಮಕ್ಕು ನೀಡಿದವರಾರು ??

ಪ್ರವಾದಿ ವಿರುದ್ಧದ ಹೇಳಿಕೆ ಖಂಡಿಸಿ ಶುಕ್ರವಾರ ಭಾರತದಲ್ಲಿ ಬೃಹತ್ ಪ್ರತಿಭಟನೆಗಳು, ಹಿಂಸಾಚಾರಗಳು ನಡೆದಿದೆ. ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ. ಪ್ರತಿಭಟನೆ ಸಂಪೂರ್ಣ ವ್ಯವಸ್ಥಿತವಾದ ಟೂಲ್ ಕಿಟ್ ಭಾಗ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಚು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

 

ದೇಶದ 10 ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು. ಎಲ್ಲ ಪ್ರತಿಭಟನೆಗಳ ನಡುವೆ ಸಾಮ್ಯತೆ ಕೂಡ ಕಂಡು ಬಂದಿದೆ. ಸಾಮೂಹಿಕ ಪ್ರಾರ್ಥನೆ ಬಳಿಕ ಜಮ್ಮು ಕಾಶ್ಮೀರದಿಂದ ಶುರುವಾದ ಪ್ರತಿಭಟನೆ ದೆಹಲಿ ಮೂಲಕ ದಕ್ಷಿಣ ಭಾರತದವರೆಗೂ ಹಬ್ಬಿತ್ತು.

ಉತ್ತರ ಪ್ರದೇಶ, ಜಮ್ಮುಕಾಶ್ಮೀರ, ಜಾರ್ಖಂಡ್, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ನಡೆದ ಎಲ್ಲ ಪ್ರತಿಭಟನೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವ ಯತ್ನವೂ ಆಗಿದೆ.

ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದ ಸಂದರ್ಭದಲ್ಲಿಯೇ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿಯೂ ಭಾರೀ ಪ್ರತಿಭಟನೆಗಳು ನಡೆದಿವೆ. ದೇಶದ ಹಲವೆಡೆ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಅದರಲ್ಲೂ ಬಂಗಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಹೌರಾದಲ್ಲಿ ಉದ್ರಿಕ್ತರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ್ದಾರೆ. ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಬಂಧಿಸಿದರು. ಪರಿಣಾಮ ಆಗ್ನೇಯ ರೈಲ್ವೇಯ ಹಲವು ರೈಲು ಸೇವೆ ಸಂಪೂರ್ಣವಾಗಿ ರದ್ದಾಗಿವೆ. ಉತ್ತರ ಭಾರತದ ಹಲವು ನಗರಗಳಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.

ಉತ್ತರಪ್ರದೇಶದಲ್ಲಿ 109 ಗಲಭೆಕೋರರನ್ನು ಬಂಧಿಸಲಾಗಿದೆ. ದೆಹಲಿ ಮತ್ತು ತೆಲಂಗಾಣದಲ್ಲಿ ಪ್ರತಿಭಟನೆ ಸಂಬಂಧ ಎಂಐಎಂ ಕಾರ್ಯಕರ್ತರನ್ನು, ಇನ್ನೂ ಕೆಲವು ಕಡೆ ಸಿಎಫ್‍ಐ ಸದಸ್ಯರನ್ನು ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಅಲರ್ಟ್ ಆಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಪ್ರವಾದಿ ವಿವಾದ ತೀವ್ರಗೊಳ್ಳಬಹುದು ಮತ್ತಷ್ಟು ಗಲಭೆ, ದೊಂಬಿಗಳು, ಶಾಂತಿ ಕದಡುವ ಕೆಲಸ ಆಗಬಹುದು. ಹೀಗಾಗಿ ಇದನ್ನು ತಡೆಯಲು ರಾಜ್ಯಗಳು ಸನ್ನದ್ಧರಾಗಬೇಕು. ಅಗತ್ಯ ಬಿದ್ದಲ್ಲಿ ಅರೆಸೇನಾ ತುಕಡಿಗಳನ್ನು ಬಳಸಿಕೊಳ್ಳಿ. ಉದ್ರೇಕಕಾರಿ ಭಾಷಣ ಮಾಡುವ ವ್ಯಕ್ತಿಗಳು, ಸೋಶಿಯಲ್ ಮಿಡಿಯಾ ಪೋಸ್ಟ್‌ಗಳ ಮೇಲೆ ನಿಗಾ ಇಡಿ ಎಂದು ಸೂಚಿಸಿದೆ. ಸಮಾಜದ ಶಾಂತಿ ಕದಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ.

Leave A Reply

Your email address will not be published.