ಹಿಂದೂ ದೇವಾಲಯವನ್ನು ಧ್ವಂಸ ಗೊಳಿಸಿದ ಕಿಡಿಗೇಡಿಗಳು !!
ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆಯುತ್ತಲೇ ಇದೆ. ಅಂತೆಯೇ ಇದೀಗ ಪೂಜಾ ಸ್ಥಳಗಳ ಮೇಲೆ ದಾಳಿಗಳು ಮುಂದುವರೆದಿದ್ದು, ಇಲ್ಲಿನ ಒರಂಗಿ ಪ್ರದೇಶದಲ್ಲಿರುವ ಹಿಂದೂ ದೇವಾಲಯವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಕೋರಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಮಾರಿ ಮಾತಾ ಮಂದಿರದಲ್ಲಿರುವ ದೇವಾಲಯದ ಮೇಲೆ ದಾಳಿ ನಡೆಸಿ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ದೇವಸ್ಥಾನವನ್ನು ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ ಕಾನೂನು ಜಾರಿ ಸಂಸ್ಥೆಗಳು ಸ್ಥಳಕ್ಕೆ ಬಂದು ಘಟನೆಯ ಕುರಿತು ಮಾಹಿತಿ ಕಲೆಹಾಕಿದ್ದು, ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಟ್ರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ದೇವಾಲಯದ ಆವರಣಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯು ಕರಾಚಿಯಲ್ಲಿ ವಾಸಿಸುವ ಹಿಂದೂ ಸಮುದಾಯದವರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಕೋರಂಗಿ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಆರರಿಂದ ಎಂಟು ಜನರು ದ್ವಿಚಕ್ರವಾಹನದಲ್ಲಿ ಬಂದು ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ. ಯಾಕೆ ದಾಳಿ ನಡೆಸಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ಪ್ರದೇಶದ ಹಿಂದೂ ನಿವಾಸಿಯೊಬ್ಬರು ತಿಳಿಸಿದ್ದಾರೆ. ದಾಳಿ ಬಗ್ಗೆ ಮಾತನಾಡಿದ ಕೋರಂಗಿ ಎಸ್ಎಚ್ಒ ಫಾರೂಕ್ ಸಂಜರಾಣಿ, ಐದರಿಂದ ಆರು ಅಪರಿಚಿತ ಶಂಕಿತರು ದೇವಾಲಯಕ್ಕೆ ಪ್ರವೇಶಿಸಿ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಸೇರಿದ ದೇವಾಲಯಗಳು ಗುಂಪು ಹಿಂಸಾಚಾರಕ್ಕೆ ಗುರಿಯಾಗುತ್ತಿವೆ. ಅಕ್ಟೋಬರ್ನಲ್ಲಿ ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್ನಲ್ಲಿ ಸ್ಥಳೀಯ ಸೆಮಿನರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಎಂಟು ವರ್ಷದ ಹಿಂದೂ ಹುಡುಗನಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ ನಂತರ ದುಷ್ಕರ್ಮಿಗಳು ಭೋಂಗ್ ಪಟ್ಟಣದಲ್ಲಿರುವ ಶ್ರೀ ಗಣೇಶ ದೇವಾಲಯವನ್ನು ಧ್ವಂಸಗೊಳಿಸಿದ್ದರು ಎಂದು ವರದಿಯಾಗಿದೆ.
ಅಧಿಕೃತ ಅಂದಾಜಿನ ಪ್ರಕಾರ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದಾಗ್ಯೂ ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ.