ಕಡಲ ತೀರದಲ್ಲಿ ಬಂಗಾರದ ನಾಣ್ಯ ತುಂಬಿದ ಹಡಗು ಪತ್ತೆ! ಬರೋಬ್ಬರಿ 1.3 ಲಕ್ಷ ಕೋಟಿ ಮೌಲ್ಯದ ಚಿನ್ನದ ನಾಣ್ಯ ಪತ್ತೆ | ಮಿತಿ ಮೀರಿದ ಜನತೆಯ ಕುತೂಹಲ !!!
ಕೊಲಂಬಿಯಾದ ಕ್ಯಾರಿಬೀನ್ ಕಡಲ
ತೀರದ ಬಳಿಯಲ್ಲಿ 1708ರಲ್ಲಿ ಮುಳುಗಿದ್ದ ಸ್ಯಾನ್ ಜೋಸ್ ಹಡಗಿನ ಬಳಿಯಲ್ಲೇ ಎರಡು ಬಂಗಾರ ತುಂಬಿರುವ ಹಡಗುಗಳು ಪತ್ತೆಯಾಗಿವೆ.
ಅಂದರೆ ಬರೋಬ್ಬರಿ 300 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ, 1.3 ಲಕ್ಷ ಕೋಟಿ ರೂ. ಮೌಲ್ಯದ ನೂರಾರು ಟನ್ ಚಿನ್ನ ತುಂಬಿರುವ ಸ್ಪೇನ್‌ನ ಹಡಗೊಂದರ ಫೋಟೋಗಳನ್ನು ಕೊಲಂಬಿಯಾದ ಸೇನೆ ಬಿಡುಗಡೆ ಮಾಡಿದೆ. ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ, ಸ್ಪೇನ್ ಹಾಗೂ ಬೊಲಿವಿಯಾ ನಡುವೆ ಜಟಾಪಟಿ ನಡೆಯುತ್ತಿದೆ.
3,100 ಅಡಿಯಷ್ಟು ಆಳದಲ್ಲಿರುವ ಹಡಗಿನ ವಿಡಿಯೋವನ್ನು ರಿಮೋಟ್ ನಿಯಂತ್ರಿತ ಸಾಧನದಿಂದ ಚಿತ್ರೀಕರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ವೀಡಿಯೋದಲ್ಲಿ ಅಲ್ಲಲ್ಲಿ ಚಿನ್ನದ ನಾಣ್ಯಗಳು ಮಡಕೆಯ ತುಂಡುಗಳು ಹಾಗೂ ಪಿಂಗಾಣಿ ಬಟ್ಟಲಿನ ಚೂರುಗಳು ಇರುವುದು ಕಂಡುಬಂದಿದೆ. ಅಲ್ಲದೆ, ಹಡಗಿನ ಪಕ್ಕ ಸಾಕಷ್ಟು ಪಿರಂಗಿಗಳೂ ಸಮುದ್ರದ ಆಳದಲ್ಲಿ ಕಂಡುಬಂದಿವೆ. ಈಗ ಪತ್ತೆಯಾಗಿರುವ ಚಿನ್ನವನ್ನು ಸಮುದ್ರದಿಂದ ಮೇಲೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೊಲಂಬಿಯಾ ಅಧ್ಯಕ್ಷ ಇವಾನ್ ಡ್ಯೂಕ್ ತಿಳಿಸಿದ್ದಾರೆ.
1708ರಲ್ಲಿ ಕೊಲಂಬಿಯಾದ ಕರಾವಳಿ ಕಾರ್ಟಜೆನಾ ಬಳಿ ಬ್ರಿಟಿಷರ ದಾಳಿಯಿಂದ ಈ ಹಡಗು ಮುಳುಗಡೆಯಾಗಿತ್ತು. ‘ಸ್ಯಾನ್ ಓಸೆ ಗ್ಯಾಲಿಯನ್’ ಎಂಬ ಈ ಹಡಗು ಸ್ಪೇನ್ ರಾಜಮನೆತನಕ್ಕೆ ಸೇರಿದ ಹಡಗು ಇದಾಗಿದೆ. 600 ಸಿಬ್ಬಂದಿ ಆ ಸಮಯದಲ್ಲಿ ಹಡಗಿನಲ್ಲಿದ್ದರು. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬದುಕುಳಿದಿದ್ದರು. ಆ ವೇಳೆ ಹಡಗಿನಲ್ಲಿ ಅಪಾರ ಚಿನ್ನ ಇತ್ತು. ಹೀಗಾಗಿ ಹಲವರು ಶೋಧ ನಡೆಸಿದ್ದರು. 2015ರಲ್ಲಿ ಈ ಹಡಗಿನ ಬಗ್ಗೆ ಕುರುಹು ಪತ್ತೆಯಾಗಿತ್ತು.
ಈ ಹಡಗು ತನ್ನ ಜಾಗದಲ್ಲಿ ಪತ್ತೆಯಾಗಿರುವುದರಿಂದ, ಅದು ತನ್ನ ಸಾಂಸ್ಕೃತಿಕ ಪರಂಪರೆಗೆ ಸೇರಿದ್ದು ಹಾಗಾಗಿ ಅದರಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಕೊಲಂಬಿಯಾ ಸರ್ಕಾರ ಹೇಳಿದೆ. ಆದರೆ, ಈ ಹಡಗು ತನ್ನದಾಗಿರುವ ಕಾರಣ ಅದರಲ್ಲಿರುವ ಅಷ್ಟೂ ಸಂಪತ್ತು ತನ್ನದು ಎಂದು ಸ್ಪೇನ್ ವಾದಿಸುತ್ತಿದೆ. ಹಡಗಿನಲ್ಲಿರುವ ಚಿನ್ನವನ್ನು ಗಣಿಗಳಿಂದ ತೆಗೆದಿದ್ದು ತನ್ನ ದೇಶದ ಪ್ರಜೆಗಳು. ಹೀಗಾಗಿ ಅದೆಲ್ಲಾ ತನಗೆ ಸೇರಬೇಕು ಎಂದು ಬೊಲಿವಿಯಾ ವಾದಿಸುತ್ತಿದೆ. ಹೀಗಾಗಿ ಅಂತಿಮವಾಗಿ ಹಡಗಿನಲ್ಲಿರುವ ಸಂಪತ್ತು ಯಾರ ಪಾಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.