ಪಾಕಿಸ್ತಾನದ ಮಾಜಿ ಮಿಲಿಟರಿ ಜನರಲ್ ಪರ್ವೇಜ್ ಮುಷರಫ್ ನಿಧನ !!!
ಪಾಕಿಸ್ತಾನದ ಮಾಜಿ ಮಿಲಿಟರಿ ಜನರಲ್(ನಿವೃತ್ತ), ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಮುಷರಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನೆರವಿನಿಂದ ಉಸಿರಾಡುತ್ತಿದ್ದ ಮುಷರಫ್ ಇಂದು ಕೊನೆಯುಸಿರೆಳೆದಿದ್ದಾರೆ.
ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು.
2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, 2013ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಪರ್ವೇಜ್ಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಆದರೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಲಾಹೋರ್ ಹೈಕೋರ್ಟ್ ನ್ಯಾಯಪೀಠ ಮಹತ್ವದ ಆದೇಶವೊಂದನ್ನು ಆವಾಗ ನೀಡಿತ್ತು. ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟು ಗಲ್ಲು ಶಿಕ್ಷೆಯನ್ನೇ ರದ್ದುಗೊಳಿಸಿತ್ತು.
ಸದ್ಯ ಅನಾರೋಗ್ಯ ಪೀಡಿತರಾಗಿರುವ ಮುಷರಫ್ ಅವರು ದುಬೈನಲ್ಲಿ ನೆಲೆಸಿದ್ದರು.