ವಿದ್ಯುತ್ ಸಂಪರ್ಕಕ್ಕೆ ಇನ್ನು ಮುಂದೆ ಒ.ಸಿ. ಪತ್ರ ಕಡ್ಡಾಯ ಅಲ್ಲ
ರಾಜ್ಯದಲ್ಲಿ ಇನ್ನು ಬಹುಮಹಡಿ ಕಟ್ಟಡಗಳು,
ಅಪಾರ್ಟ್‌ಮೆಂಟ್-ಮನೆಗಳ ಸಹಿತ ವಾಣಿಜ್ಯ ಅಥವಾ ವಾಸ ಉದ್ದೇಶಿತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದಕ್ಕೆ ಸ್ವಾಧೀನಾನುಭವ ಪತ್ರ (ಒ.ಸಿ.) ಕಡ್ಡಾಯವಾಗಿ ಸಲ್ಲಿಸಬೇಕಾಗಿಲ್ಲ.
ಪ್ರಸ್ತುತ ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಸ್ವಾಧೀನಾನುಭವ ಪತ್ರ ಸಲ್ಲಿಸುವುದು ಕಡ್ಡಾಯ. ಈ ನಿಯಮದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈಗ ಈ ನಿಯಮವನ್ನು ರದ್ದುಪಡಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿರ್ಧರಿಸಿದೆ.
ಈ ನಿಯಮವನ್ನು ಬದಲಿಸುವಂತೆ ಕೈಗಾರಿಕಾ ವಲಯ, ರಿಯಲ್ ಎಸ್ಟೇಟ್ ಉದ್ಯಮದವರು ಸರಕಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಕೈಗಾರಿಕಾ ಇಲಾಖೆ ಕೂಡ ಈ ನಿಯಮಕ್ಕೆ ತಿದ್ದುಪಡಿ ತರುವಂತೆ ಕೋರಿ ಇಂಧನ ಇಲಾಖೆಗೆ ಕಳೆದ ವರ್ಷ ಮನವಿ ಮಾಡಿತ್ತು. ಆ ಮನವಿ ಆಧರಿಸಿ ಇಂಧನ ಇಲಾಖೆಯು ಕಳೆದ ಮಾರ್ಚ್‌ನಲ್ಲಿ ನಿಯಮಕ್ಕೆ ತಿದ್ದುಪಡಿ ತರುವಂತೆ ಆಯೋಗಕ್ಕೆ ಕೋರಿಕೆ ಸಲ್ಲಿಸಿತ್ತು. ಎಸ್ಕಾಂಗಳ ಮನವಿ ಆಲಿಸಿದ ಆಯೋಗವು ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನಾನುಭವ ಪತ್ರ ಕಡ್ಡಾಯ ಎನ್ನುವ ನಿಯಮ ತೆಗೆದು ಹಾಕಿ, ಕಟ್ಟಡ ಮಾಲಕತ್ವಕ್ಕೆ ಸಂಬಂಧಿಸಿದ ದಾಖಲಾತಿ ಮಾತ್ರ ಸಲ್ಲಿಸಿದರೆ ಸಾಕು ಎನ್ನುವ ತಿದ್ದುಪಡಿ ಮಾಡಿ ಸಾರ್ವಜನಿಕರಿಂದ ಅಹವಾಲು ಸಲ್ಲಿಸಲು ಮೇ 30ರ ವರೆಗೆ ಅವಕಾಶ ನೀಡಿತ್ತು. ಈ ತಿದ್ದುಪಡಿ ಕುರಿತು ಆಯೋಗ ವಿಚಾರಣೆ ನಡೆಸಿ ಶೀಘ್ರ ಅಂತಿಮ ಆದೇಶ ಹೊರಡಿಸಲಿದೆ.
ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಸಂಬಂಧ ಗ್ರಾಹಕರು ಸ್ವಾಧೀನಾನುಭವ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುವ ನಿಯಮವನ್ನು ರದ್ದುಗೊಳಿಸುವ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ವಿದ್ಯುತ್ ನಿಯಂತ್ರಣ ಆಯೋಗವು ಈ ಸಂಬಂಧ ಈಗಾಗಲೇ ನಿಯಮಕ್ಕೆ ತಿದ್ದುಪಡಿಗೊಳಿಸಿ ಆ ಕುರಿತ ಪ್ರಕ್ರಿಯೆ ನಡೆಸುತ್ತಿದೆ. ಇನ್ನು 15 ದಿನದೊಳಗೆ ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಸಂಬಂಧ ಹೊಸ ನಿಯಮ ಜಾರಿಗೆ ಬರುವ ನಿರೀಕ್ಷೆಯಿದೆ.