ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತಕ್ಕೆ ನಲುಗಿದ ತೆಂಗು ಬೆಳೆಗಾರರು | ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ…
ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಕುರಿತು ಕೇಂದ್ರ ಸರಕಾರದ ನೀತಿಯಿಂದಾಗಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಈ ಬೆಲೆ ಇಳಿಕೆಯ ಬಿಸಿ ಈಗ ತೆಂಗಿನ ಕಾಯಿಯನ್ನು ಕೊಬ್ಬರಿ ಮಾಡಿ ಮಾರಾಟಕ್ಕಿಟ್ಟಿದ್ದ ರೈತರಿಗೆ ತಟ್ಟಲಾರಂಭಿಸಿದೆ.
ತೆಂಗು ಹೆಚ್ಚಾಗಿ ಬೆಳೆವ ನಾಡಾದ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಗಳ ಬೆಳೆಗಾರರಲ್ಲಿ ಈ ಬೆಲೆ ಇಳಿಕೆ ಬೇಸರ ಮೂಡಿಸಿದೆ. ರಾಮನಗರ ಸೇರಿದಂತೆ ತೆಂಗು ಬೆಳೆವ ಸಾಕಷ್ಟು ಜಿಲ್ಲೆಗಳ ರೈತರು ತೆಂಗಿನ ಕಾಯಿಯನ್ನು ಮೂರು ತಿಂಗಳ ಹಿಂದೆಯೇ ಕಿತ್ತು ಕೊಬ್ಬರಿ ಮಾಡಿ ಇಟ್ಟುಕೊಂಡಿದ್ದಾರೆ. ಬೆಲೆ ಏರಿಕೆ ಆಗುವವರೆಗೂ ಕೊಬ್ಬರಿ ಇಟ್ಟುಕೊಂಡು ಕಾಯಲು ಬರುವುದಿಲ್ಲ. ಕಾರಣ ಕೊಬ್ಬರಿ ದಿನಕಳೆದಂತೆ ಸತ್ವ ಕಳೆದುಕೊಳ್ಳಲು ಪ್ರಾರಂಭ ಮಾಡುತ್ತದೆ. ಹೀಗಾಗಿ ಕೆಲ ರೈತರು ಏನು ಮಾಡುವುದೆಂದು ದಿಕ್ಕುತೋಚದಂತಾಗಿದ್ದಾರೆ.
ಜನವರಿ, ಫೆಬ್ರವರಿಯಲ್ಲಿ ಕ್ವಿಂಟಾಲ್‌ಗೆ 17,400 ರೂ. ಇದ್ದ ಉಂಡೆ ಕೊಬ್ಬರಿ ಬೆಲೆ ಇದೀಗ 13,500 ರೂ. ಅಂಚಿಗೆ ತಲುಪಿದೆ. ಕೆಲವೇ ದಿನಗಳಲ್ಲಿ ಬೆಂಬಲ ಬೆಲೆ 11 ಸಾವಿರ ರೂ. ಮಟ್ಟಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಮಾರುಕಟ್ಟೆ ತಜ್ಞರ ಪ್ರಕಾರ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಗೊಳಿಸಿರುವುದು ಕೊಬ್ಬರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಎಣ್ಣೆ ಕಾಳುಗಳ ಬೆಲೆ ಕಡಿಮೆಯಾದಂತೆ, ಕೊಬ್ಬರಿ ಎಣ್ಣೆಗೆ ಬೇಡಿಕೆ ಕಡಿಮೆಯಾಗಿದೆ. ಕೊಬ್ಬರಿ ಬೆಲೆ ಕುಸಿತಕ್ಕೆ ಇದು ಇನ್ನೊಂದು ಕಾರಣ ಎನ್ನಲಾಗಿದೆ. ಎಣ್ಣೆ ಕಂಪನಿಗಳ ಭವಿಷ್ಯವೇ ಸರಕಾರಕ್ಕೆ ಗೊತ್ತಾಗಲಿಲ್ಲವೇ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇನ್ನು ಮುಂದಾದರೂ ಸರಕಾರ ಕೊಬ್ಬರಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸೂಕ್ತ, ಪರ್ಯಾಯ ಕ್ರಮ ಜಾರಿಗೆ ತರದಿದ್ದರೆ ಯುವ ಸಮುದಾಯ ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಇದೆ.