ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಬಡ ದಂಪತಿಗಳು!!
ಈಗಿನ ಆಸ್ಪತ್ರೆಯ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ‘ದುಡ್ಡೇ ದೊಡ್ಡಪ್ಪ’ ಎನ್ನುವ ಮಟ್ಟಿಗೆ. ಯಾಕಂದ್ರೆ ಹಣ ಕೊಟ್ರೆ ಮಾತ್ರ ಮೊದಲ ಆದ್ಯತೆ ಎಂಬಂತಾಗಿದೆ. ಇದು ಎಷ್ಟರ ಮಟ್ಟಿಗೆ ಮುಂದುವರೆದಿದೆ ಅಂದರೆ ತಮ್ಮ ಮನೆಯವರ ಶವವನ್ನು ಪಡೆಯಲೂ ದುಡ್ಡು ಕೊಡಬೇಕಾದ ಪರಿಸ್ಥಿತಿ!
ಹೌದು. ಬಿಹಾರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಪೋಷಕರಿಗೆ ಮಗನ ಶವ ನೀಡಲು 50,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಎಂತಹ ಪಾಡು ಎಂದರೆ, ಬಡತನದ ಬೇಗೆಯಲ್ಲಿರುವ ದಂಪತಿಗಳು ಹೇಗಾದರೂ ಹಣ ಹೊಂದಿಸಿ ಮಗನ ಹೆಣವನ್ನು ಮನೆಗೆ ತರಿಸಬೇಕು ಎನ್ನುವ ಸಂಕಷ್ಟ. ಅದಕ್ಕಾಗಿ ಇವರು ಹಿಡಿದ ದಾರಿ ಎಂತಾ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಬಿಹಾರದ ಸಮಸ್ತಿಪುರದ ನಿವಾಸಿಗಳಾದ ಮಹೇಶ್ ಠಾಕೂರ್ ಅವರ ಮಗ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಇದೇ ಚಿಂತೆಯಲ್ಲಿದ್ದ ಪೋಷಕರಿಗೆ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ಕರೆ ಬಂದಿದೆ. ಕೂಡಲೇ ಇವರು ಆಸ್ಪತ್ರೆಗೆ ಧಾವಿಸಿದ್ದಾರೆ. ಆದ್ರೆ, ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮಗನ ಶವ ನೀಡಲು 50,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಹೀಗಾಗಿ ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಈ ದಂಪತಿಗಳು ಊರೂರು ಸುತ್ತಿ, ಮನೆ ಮನೆಗೆ ಅಲೆದು ಹಣವನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಆಸ್ಪತ್ರೆ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.