ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಮೂಲಕವೂ ಯುಪಿಐ ಪೇಮೆಂಟ್ ಮಾಡಬಹುದು !! | ಆರ್‌ಬಿಐ ನ ಮೂರನೇ ದ್ವೈಮಾಸಿಕ ವಿತ್ತೀಯ ಪರಾಮರ್ಶೆಯ ಮುಖ್ಯಾಂಶಗಳು ಇಂತಿವೆ ನೋಡಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಜನಸಾಮಾನ್ಯರಿಗೆ ಭಾರೀ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದ್ದು, ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ನೊಂದಿಗೆ ಲಿಂಕ್ ಮಾಡಬಹುದು ಎಂದು ಘೋಷಿಸಿದೆ.

 

ರುಪೇ ಕ್ರೆಡಿಟ್ ಕಾರ್ಡ್‌ನೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿನ್ನೆ ಯುಪಿಐ ಮೂಲಕ ರುಪೇ ಕ್ರೆಡಿಟ್ ಕಾರ್ಡ್ ಪಾವತಿಗೆ ಅನುಮತಿ ನೀಡಿದ್ದಾರೆ. ವಿತ್ತೀಯ ನೀತಿ ಪರಾಮರ್ಶೆ ಪತ್ರಿಕಾಗೋಷ್ಠಿಯಲ್ಲಿ ಶಕ್ತಿಕಾಂತ ದಾಸ್ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ.

ಪ್ರಸ್ತುತ, UPI ಬಳಕೆದಾರರು ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ವಹಿವಾಟುಗಳನ್ನು ನಡೆಸಬಹುದಾಗಿದೆ. ಹೊಸ ವ್ಯವಸ್ಥೆಯು UPI ಪ್ಲಾಟ್‌ಫಾರ್ಮ್ ಮೂಲಕ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಹೆಚ್ಚಿನ ಅವಕಾಶಗಳನ್ನು ಮತ್ತು ಅನುಕೂಲತೆಯನ್ನು ಒದಗಿಸಲಿದೆ ಎಂಬ ನಿರೀಕ್ಷೆ ಇದೆ ಎಂದು ದಾಸ್ ಹೇಳಿದ್ದಾರೆ. ಪ್ರಸ್ತುತ ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ 26 ಕೋಟಿಗೂ ಹೆಚ್ಚು ಬಳಕೆದಾರರು ಮತ್ತು 50 ಮಿಲಿಯನ್ ವ್ಯಾಪಾರಿಗಳು ತೊಡಗಿಸಿಕೊಂಡಿದ್ದಾರೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಕೇವಲ ಮೇ 2022 ಒಂದೇ ತಿಂಗಳಿನಲ್ಲಿ, UPI ಮೂಲಕ 10.40 ಲಕ್ಷ ಕೋಟಿ ಮೌಲ್ಯದ 594.63 ಕೋಟಿ ವಹಿವಾಟುಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರ್ಥಿಕತೆಗೆ ಬಲ ನೀಡಲು ಮಾತು ಸಾಕಷ್ಟು ದ್ರವ್ಯತೆ ಅಥವಾ ನಗದು ಲಭ್ಯತೆಯನ್ನು ಆರ್‌ಬಿಐ ಖಚಿತಪಡಿಸಲಿದೆ ಎಂದು ದಾಸ್ ಹೇಳಿದ್ದಾರೆ, “ಮುಂಬರುವ ದಿನಗಳಲ್ಲಿ, ಸಾಂಕ್ರಾಮಿಕ ರೋಗದ ಹಿನ್ನೆಲೆ ಒದಗಿಸಲಾಗಿದ್ದ ಹೆಚ್ಚುವರಿ ಹಣವನ್ನು ಹಲವಾರು ವರ್ಷಗಳಲ್ಲಿ ಸಾಮಾನ್ಯ ಸ್ಥಿತಿಗೆ ತರಲಾಗುವುದು. ಆದರೆ, ಇದೆ ವೇಳೆ, ಆರ್ಥಿಕತೆಯ ಉತ್ಪಾದನಾ ಅಗತ್ಯಗಳಿಗಾಗಿ ಸಾಕಷ್ಟು ದ್ರವ್ಯತೆ ಲಭ್ಯವಿರುವುದನ್ನು ಕೇಂದ್ರೀಯ ಬ್ಯಾಂಕ್ ಖಚಿತಪಡಿಸಲಿದೆ” ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

RBI ನ ಪ್ರಮುಖ ನಿರ್ಧಾರಗಳು:

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಬುಧವಾರ ಮಂಡಿಸಿದ ಪ್ರಸಕ್ತ ಹಣಕಾಸು ವರ್ಷದ ಮೂರನೇ ದ್ವೈಮಾಸಿಕ ವಿತ್ತೀಯ ಪರಾಮರ್ಶೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.

*ರೆಪೊ ದರವನ್ನು ಶೇ.0.50 ರಷ್ಟು ಹೆಚ್ಚಿಸಲಾಗಿದ್ದು, ಇದೀಗ ರೆಪೋ ದರ ಶೇ.4.9ಕ್ಕೆ ತಲುಪಿದೆ. ಐದು ವಾರಗಳಲ್ಲಿ ಎರಡನೇ ಬಾರಿಗೆ ರೆಪೋ ಏರಿಕೆಯಾಗಿದೆ ಎಂಬುದು ಇಲ್ಲಿ ಗಮನಾರ್ಹ.
*ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಮುನ್ಸೂಚನೆಯು ಶೇ.5.7 ರಿಂದ ಶೇ.6.7ಕ್ಕೆ ಏರಿಕೆಯಾಗಿದೆ.
*2022-23 ರ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯು ಶೇ 7.2 ರಷ್ಟು ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
*ಕ್ರೆಡಿಟ್ ಕಾರ್ಡ್ ಅನ್ನು UPI ಜೊತೆಗೆ ಲಿಂಕ್ ಮಾಡಲಾಗುವುದು ಮತ್ತು ರುಪೇ ಕ್ರೆಡಿಟ್ ಕಾರ್ಡ್ ಗಳು ಮೊದಲು ಇದರಲ್ಲಿ ಶಾಮೀಲಾಗಲಿವೆ.
*ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಾಲ ನೀಡಲು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ.
*ಇದೀಗ ನಗರ ಸಹಕಾರಿ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಿವೆ.
*ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನಿಯಮಿತ ಕಾಲಾವಧಿಯಲ್ಲಿ ಅಗತ್ಯ ಸೇವೆಗಳಿಗೆ ಸ್ವಯಂ-ಪಾವತಿಯನ್ನು ರೂ.5,000 ರಿಂದ ರೂ.15,000 ಕ್ಕೆ ಹೆಚ್ಚಿಸಲಾಗಿದೆ.

Leave A Reply

Your email address will not be published.