ನೀರಿಗೆ ಬಿದ್ದ ಬ್ರಹ್ಮಾವರ ತಹಶೀಲ್ದಾರ್!!!
ಅರೆ, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್ ನೀರಿಗೆ ಬಿದ್ದರು ಎಂಬ ಮಾತು ಕೇಳಿ ಆಶ್ಚರ್ಯ ಆಯಿತಾ ? ಆದರೆ ಯಾಕೆ ಅನ್ನೋ ಮಾಹಿತಿ ನಾವಿಲ್ಲಿ ನಿಮಗೆ ನೀಡುತ್ತೇವೆ. ತಹಶೀಲ್ದಾರ್ ರಾಜಶೇಖರಮೂರ್ತಿ ಅವರು ನೀಲಾವರ ಬಳಿ ಇರುವ ಪಂಚಮಿಕಾನನ ಕೂರಾಡಿ ಸೇತುವೆ ಬಳಿ ಸೀತಾನದಿಗೆ ಬಿದ್ದಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕದಳ ಮತ್ತು ಬ್ರಹ್ಮಾವರ ಗೃಹರಕ್ಷಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಅವರನ್ನು ರಕ್ಷಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯ ಜನರಿಗೆ ಪ್ರವಾಹದ ಅನುಭವ ಆಗಿದೆ. ಪ್ರವಾಹ ಬಂದರೆ ಏನೆಲ್ಲಾ ಅಪಾಯ ಎದುರಿಸಬಹುದು ಎಂಬ ಮಾಹಿತಿ ಎಲ್ಲರಿಗೂ ಇದೆ. ಅದರಲ್ಲೂ ಅತಿಹೆಚ್ಚು ಪ್ರವಾಹ ಬರುವ ಸೀತಾನದಿಯಲ್ಲಿ ನೀರು ಅಪಾಯಕಾರಿ ಮಟ್ಟಕ್ಕೆ ಏರಿದಾಗ ನಡೆಸಬೇಕಾದ ಕಾರ್ಯಾಚರಣೆಯ ಈ ಅಣಕು ಪ್ರದರ್ಶನ ಏರ್ಪಾಡು ಮಾಡಲಾಗಿತ್ತು.
ಬ್ರಹ್ಮಾವರ ತಾಲೂಕಿನ ನೆರೆ ರಕ್ಷಣಾ ತಂಡದವರಿಂದ ನಡೆದ ಈ ಕಲ್ಪಿತ ಕಾರ್ಯಾಚರಣೆಯಲ್ಲಿ ಸ್ವತಃ ಬ್ರಹ್ಮಾವರ ತಹಶೀಲ್ದಾರ್ ಅವರೇ ನದಿಗೆ ಇಳಿದು ತಂಡದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ. ಈ ಮೂಲಕ
ಮುಂಬರುವ ಮುಂಗಾರಿನಲ್ಲಿ ಬರಬಹುದಾದ ಸಂಭಾವ್ಯ ಅಪಾಯವನ್ನು ಎದುರಿಸಲು ತನ್ನ ತಂಡವನ್ನು ಸಿದ್ಧಗೊಳಿಸಿದ್ದಾರೆ.
ಕಲ್ಪಿತ ಕಾರ್ಯಾಚರಣೆಯಲ್ಲಿ ಬೋಟ್ ನಲ್ಲಿದ್ದ ಮುಳುಗು ತಜ್ಞರು, ಪ್ರಥಮ ಚಿಕಿತ್ಸೆ ನೀಡಲು ದಾದಿಯರು, ತುರ್ತು ಅಗತ್ಯವಾಗುವ ಆಂಬುಲೆನ್ಸ್, ಪೊಲೀಸರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು. ಆಡಳಿತ ವ್ಯವಸ್ಥೆ ಜನರಲ್ಲಿ ನೆರೆಯ ಅವಧಿಯಲ್ಲಿ ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿತು.
ಸಂತ್ರಸ್ತನ ಸ್ಥಾನದಲ್ಲಿ ಸ್ವತಃ ತಹಶೀಲ್ದಾರ್ ರೇ ಇದ್ದು, ಅನುಭವ ಪಡೆದುಕೊಳ್ಳುವ ಮೂಲಕ ಕಾರ್ಯಾಚರಣೆ ಲೋಪದೋಷಗಳನ್ನು ತಿದ್ದಲು ಸಹಾಯ ಮಾಡಿದ್ದಾರೆ.