ಇನ್ನು ಮುಂದೆ ರೈಲಿನಲ್ಲಿ ಮೀಸಲಾತಿ ಟಿಕೆಟ್ ಇಲ್ಲದೆಯೂ ಪ್ರಯಾಣ!!
ಅದೆಷ್ಟೋ ಜನರು ಆ ಕ್ಷಣಕ್ಕೆ ಪ್ಲಾನ್ ಮಾಡಿ ಟ್ರಾವೆಲ್ ಮಾಡೋರೇ ಹೆಚ್ಚು. ಆದ್ರೆ ಈತರದ ತಕ್ಷಣ ಪ್ರಯಾಣಕ್ಕೆ ರೈಲ್ವೇ ಇಲಾಖೆ ಕೈ ಜೋಡಿಸುತ್ತಿರಲಿಲ್ಲ. ಯಾಕಂದ್ರೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಆದ್ರೆ ಇದೀಗ ಪ್ರಯಾಣಿಕರಿಗೆ ಸಿಹಿಸುದ್ದಿ ಒಂದಿದ್ದು, ಮೀಸಲಾತಿ ಟಿಕೆಟ್ ಇಲ್ಲದೆಯೂ ಪ್ರಯಾಣ ಬೆಳೆಸಬಹುದು.
ಹೌದು. ರೈಲ್ವೆ ವಿಶೇಷ ಸೌಲಭ್ಯವನ್ನು ನೀಡುತ್ತಿದ್ದು, ಈಗ ಮೀಸಲಾತಿ ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು. ಈ ಮೊದಲು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು ಅಂತಹ ಸಮಯಗಳಿಗೆ ಏಕೈಕ ಬೆಂಬಲವಾಗಿತ್ತು, ಆದರೆ ಅದರಲ್ಲಿ ಟಿಕೆಟ್ ಗಳನ್ನು ಪಡೆಯುವುದು ಸುಲಭವಲ್ಲ. ಅದಕ್ಕಾಗಿ ಈ ಹೊಸ ಯೋಜನೆ ರೂಪಿಸಿದೆ.
ಆಕಸ್ಮಿಕವಾಗಿ ಎಲ್ಲಾದರೂ ಪ್ರಯಾಣಿಸಬೇಕಾದರೆ ಅದಕ್ಕಾಗಿ ರೈಲ್ವೆ ರಿಸರ್ವೇಶನ್ ಟಿಕೆಟ್ ಇಲ್ಲದಿದ್ದರೂ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ನಲ್ಲಿಯೂ ಪ್ರಯಾಣಿಸಬಹುದು. ಹೌದು, ನಿಮ್ಮ ಬಳಿ ಮೀಸಲಾತಿ ಟಿಕೆಟ್ ಇಲ್ಲದಿದ್ದರೆ ಮತ್ತು ನೀವು ಅನಿರೀಕ್ಷಿತವಾಗಿ ಎಲ್ಲಾದರು ಪ್ರಯಾಣಿಸಬೇಕಾದರೆ ಅಂತಹ ಸಂದರ್ಭದಲ್ಲಿ ನೀವು ಕೇವಲ ಪ್ಲಾಟ್ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲು ಹತ್ತಬಹುದು. ಬಳಿಕ ನೀವು ಟಿಕೆಟ್ ಪರೀಕ್ಷಕರ ಬಳಿ ಹೋಗಿ ನಿಮ್ಮ ಗಮ್ಯಸ್ಥಾನಕ್ಕೆ ನಿಗದಿತ ಟಿಕೆಟ್ ಮೊತ್ತವನ್ನು ನೀಡಿ ಟಿಕೆಟ್ ಪಡೆಯಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಈ ನಿಯಮವನ್ನು ಮಾಡಿದೆ. ಆದರೆ ಪ್ಲಾಟ್ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲು ಹತ್ತಿದ ಬಳಿಕ ನೀವು ತಕ್ಷಣ ಟಿಟಿಇಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬೇಕು.
ತುರ್ತು ಸಂದರ್ಭಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಪಡೆದು ರೈಲು ಹತ್ತಿ ನಂತರ ಟಿಕೆಟ್ ಪಡೆದು ಪ್ರಯಾಣಿಸಬಹುದು. ಆದರೆ, ಸೀಟ್ ಸಿಗುವುದು ಅಷ್ಟು ಸುಲಭವಲ್ಲ. ಹಲವು ವೇಳೆ ಮೊದಲೇ ಟಿಕೆಟ್ ಬುಕ್ ಮಾಡಿದಾಗಲೂ ಮೀಸಲಾಟಿ ಆಸನ ಸಿಗದೆ ಪ್ರಯಾಣಿಸಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ತುರ್ತಾಗಿ ಟಿಕೆಟ್ ಪಡೆದಾಗ ಸೀಟ್ ಸಿಗದೇ ಇರಬಹುದು.
ರೈಲ್ವೇ ನಿಯಮಗಳ ಪ್ರಕಾರ, ರೈಲಿನಲ್ಲಿ ಸೀಟು ಖಾಲಿ ಇಲ್ಲದಿದ್ದರೆ, ಟಿಟಿಇ ನಿಮಗೆ ಮೀಸಲು ಆಸನವನ್ನು ನೀಡಲು ನಿರಾಕರಿಸಬಹುದು, ಆದರೆ ನಿಮ್ಮ ಪ್ರಯಾಣವನ್ನು ತಡೆಯಲು ಸಾಧ್ಯವಿಲ್ಲ. ಒಂದೊಮ್ಮೆ ನೀವು ಮೀಸಲಾತಿ ಆಸನ ಪಡೆಯದ ಕಾರಣ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಬಯಸದಿದ್ದರೆ, ಕೇವಲ 250 ರೂ.ಗಳ ದಂಡದ ಶುಲ್ಕದೊಂದಿಗೆ, ನಿಮ್ಮ ಗಮ್ಯಸ್ಥಾನಕ್ಕಾಗಿ ಟಿಟಿಯಿಂದ ಪಡೆದ ಟಿಕೆಟ್ ಅನ್ನು ನೀವು ಕ್ಯಾನ್ಸಲ್ ಮಾಡಬಹುದು. ಇದಕ್ಕಾಗಿ, ನೀವು ತೆಗೆದುಕೊಂಡ ಟಿಕೆಟ್ನ ವೆಚ್ಚವನ್ನು ಕಡಿತಗೊಳಿಸಿದ ನಂತರ ಉಳಿದ ಹಣವನ್ನು ಮರಳಿಸಲಾಗುತ್ತದೆ.
ಪ್ಲಾಟ್ಫಾರ್ಮ್ ಟಿಕೆಟ್ ನಿಮಗೆ ರೈಲ್ವೆ ಪ್ಲಾಟ್ಫಾರ್ಮ್ಗೆ ಹೋಗಲು ಮಾತ್ರವಲ್ಲ, ರೈಲು ಹತ್ತಲು ಸಹ ಅರ್ಹವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ವಿಶೇಷವೆಂದರೆ ನೀವು ರೈಲು ಹತ್ತಿದ ನಂತರ ನೀವು ಪ್ರಯಾಣಿಸಲು ಬಯಸುವ ಅದೇ ಸ್ಲೀಪರ್, ಎಸಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಇದಲ್ಲದೆ, ಯಾವುದೇ ಕಾರಣದಿಂದ ನಿಮ್ಮ ರೈಲು ತಪ್ಪಿಹೋದರೆ, ಮುಂದಿನ ಎರಡು ನಿಲ್ದಾಣಗಳವರೆಗೆ ಟಿಟಿಇ ನಿಮ್ಮ ಆಸನವನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ಅಲ್ಲದೆ ಮುಂದಿನ ಎರಡು ನಿಲ್ದಾಣಗಳವರೆಗೆ ರೈಲು ಹಿಡಿಯಲು ಅವಕಾಶವಿದ್ದರೆ ನೀವು ಮುಂದಿನ ನಿಲ್ದಾಣಕ್ಕೆ ಹೋಗಿ ರೈಲು ಹತ್ತಬಹುದು. ಆದರೆ ಎರಡು ನಿಲ್ದಾಣಗಳ ಒಳಗೆ ಬಂದು ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದಿದ್ದರೆ ನಂತರ ಟಿಟಿಇ RAC ಟಿಕೆಟ್ನೊಂದಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಈ ಆಸನವನ್ನು ನೀಡಬಹುದು.