ಪ್ರಯಾಣದ ವೇಳೆ ವಿಮಾನದಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಆಚೆ ಹಾಕಿ – ಹೈಕೋರ್ಟ್ !!
ಕೊರೋನಾ ಬಳಿಕ ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮ ಜಾರಿಯಲ್ಲಿದೆ. ಹಾಗಿದ್ದೂ ಮಾಸ್ಕ್ ಧರಿಸದ ಪ್ರಯಾಣಿಕರಿಗೆ ವಿಮಾನ ಏರಲು ಅವಕಾಶ ಕೊಡಬೇಡಿ. ಒಂದು ವೇಳೆ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೆ ದೊಡ್ಡ ಪ್ರಮಾಣದ ದಂಡ ವಿಧಿಸಿ, ನೋ ಫ್ಲೈ ಲಿಸ್ಟ್‌ಗೆ ಸೇರಿಸಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕು ಮಂದಗತಿಯಲ್ಲಿ ಏರುತ್ತಿದ್ದು, ಇಂತಹ ಸಂದರ್ಭದಲ್ಲಿ ವಿಮಾನಗಳ ಮತ್ತು ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವ ನಿಯಮ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ ಎಂದು ಸಲ್ಲಿಸಲಾಗಿದ್ದು, ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ವಾದ ಮಂಡಿಸಿದ ಡಿಜಿಸಿಎ ಪರ ವಕೀಲರು, ಉಪಹಾರ ಸೇವನೆ ವೇಳೆ ಮಾತ್ರ ವಿಮಾನಗಳಲ್ಲಿ ಮಾಸ್ಕ್‌ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ತೃಪ್ತಿಯಾಗದ ಪೀಠ ನಿಯಮ ಪಾಲಿಸದ ಪ್ರಯಾಣಿಕರನ್ನು ಅಗತ್ಯ ಬಿದ್ದರೇ ವಿಮಾನದಿಂದ ಆಚೆ ಹಾಕಿ ಎಂದು ಹೇಳಿತು.
ಕೊರೋನಾ ನಿಯಮ ಉಲ್ಲಂಘಿಸುವ ಪ್ರಯಾಣಿಕರನ್ನು ನಿಯಂತ್ರಿಸಲು ಪ್ರತ್ಯೇಕ ನಿಯಮಗಳನ್ನು ರೂಪಿಸಬೇಕು. ಫ್ಲೈಟ್‍ನ ಕ್ಯಾಪ್ಟನ್ ಮತ್ತು ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾ. ವಿಪಿನ್ ಸಂಘಿ ಹೇಳಿದರು.
ಕೊರೋನಾ ನಿಯಂತ್ರಿಸಲು ಮಾಸ್ಕ್ ನಿಯಮ ಜಾರಿ ಮಾಡಿದೆ. ಇದರ ಉಲ್ಲಂಘನೆಯಿಂದ ಇತರರಿಗೆ ತೊಂದರೆಯಾಗಲಿದೆ. ಉಪಹಾರದ ಸಮಯ ಹೊರತುಪಡಿಸಿ ಕಡ್ಡಾಯವಾಗಿ ನಿಯಮಗಳ ಪಾಲನೆ ಮಾಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿತು.