ಕಡಬ:ಪೆರಾಬೆ ಗ್ರಾ.ಪಂನಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಾಣೆಗೆ ತಜ್ಞರ ಗೈರು!! ಕಾದು ಕಾದು ಸುಸ್ತಾಗಿ ಮನೆ ದಾರಿ ಹಿಡಿದ ಸಾರ್ವಜನಿಕರು
ಕಡಬ: ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 02ರಂದು ಕಾರ್ಮಿಕ ಇಲಾಖೆ, ಪೆರಾಬೆ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಿದ್ದು, ತಪಾಸಣೆಗೆ ಆಗಮಿಸಿದ್ದ ಸಾರ್ವಜನಿಕರು ವೈದ್ಯರನ್ನು ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ಸು ತೆರಳಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಕಾರ್ಮಿಕ ಇಲಾಖೆಯ ವತಿಯಿಂದ ಆಯೋಜನೆಗೊಂಡಿದ್ದ ಈ ತಪಾಸಣೆ ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞರು ಆಗಮಿಸದೇ ಇದ್ದುದರಿಂದ ಕೆಲ ಕಾಲ ಪಂಚಾಯತ್ ಆವರಣದಲ್ಲಿ ಆಕ್ರೋಶದ ನುಡಿಗಳು ಕೇಳಿಬಂದಿದ್ದವು.
ಈ ಬಗ್ಗೆ ಪಂಚಾಯತ್ ಪ್ರತಿನಿಧಿಗಳು,ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿದ್ದು, ಅತ್ತ ಕಡೆಯಿಂದ ಉಡಾಫೆ ಉತ್ತರ ಬಂದಾಗ ಕಾರ್ಯಕ್ರಮ ಆಯೋಜಕರ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದು, ತಮ್ಮ ನಿತ್ಯ ಕೆಲಸಗಳನ್ನು ಬದಿಗಿಟ್ಟು ಬಂದಿದ್ದ ಸಾರ್ವಜನಿಕರು ಅಸಮಾಧಾನದಿಂದ ಮನೆಯತ್ತ ಹೆಜ್ಜೆ ಹಾಕಿದ್ದು ಸಾರ್ವಜನಿಕ ವಲಯದಲ್ಲಿ ತೀರಾ ಆಕ್ರೋಶಕ್ಕೆ ಕಾರಣವಾಗಿದೆ.