ಅಡಕೆ ಆಮದು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ ವೀರೇಂದ್ರ ಹೆಗ್ಗಡೆ

ಮಂಗಳೂರು: ವಿದೇಶದಿಂದ ದೇಶದ ಗಡಿ ಮೂಲಕ ಅಡಕೆಯ ಅಕ್ರಮ ಪ್ರವೇಶ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕ್ಯಾಂಪ್ಕೋ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್) ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನ ಮಂತ್ರಿಗಳನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ.

ಇಂತಹ ಅಕ್ರಮ ಚಟುವಟಿಕೆಗಳು ಸ್ಥಳೀಯವಾಗಿ ಬೆಳೆದ ಅಡಕೆಯ ಬೆಲೆಯನ್ನು ಅಸ್ಥಿರಗೊಳಿಸುವುದು ಮಾತ್ರವಲ್ಲದೇ, ಲಕ್ಷಾಂತರ ಅಡಕೆ ರೈತರ ಜೀವನ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ. ಅಡಕೆ ಮೇಲೆ ಜಿಎಸ್‌ಟಿ ಕೂಡ ಹೇರಿಕೆಯಾಗಿದ್ದು, ಇದು ಕೂಡ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಧಾನ ಮಂತ್ರಿಗಳು ಇಂತಹ ಕಾನೂನು ಬಾಹಿರ ಅಡಕೆ ಆಮದು ಮತ್ತು ಸರಿಯಾದ ಕಾನೂನು ದಾಖಲೆಗಳಿಲ್ಲದೆ ನಡೆಸುವ ಅಕ್ರಮ ಸಾಗಾಟ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ. ಹೆಗ್ಗಡೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅಡಕೆ, ಕರಿಮೆಣಸು ಮ್ಯಾನ್ಮರ್ ಗಡಿಯಿಂದ ಕಡಿಮೆ ಬೆಲೆಗೆ ಆಮದು

ಕಡಿಮೆ ದರವನ್ನು ಅಡಕೆಯ ಸರಕು ಪಟ್ಟಿಯಲ್ಲಿ
ನಮೂದಿಸಿ ಅಡಕೆ ಮಾರಾಟ ಮಾಡುವುದನ್ನು ತಡೆಯಬೇಕು. ನಮ್ಮ ದೇಶದ ಬಿಳಿ ಮತ್ತು ಕೆಂಪು ಅಡಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್ ಏಜೆನ್ಸಿ ಕ್ಯಾಂಪ್ಕೋ ಅಥವಾ ಎಆರ್‌ಡಿಎಫ್‌ನ್ನು ಅಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿ ನೀಡಲು ಗುರುತಿಸಬಹುದು. ಪ್ರಧಾನ ಮಂತ್ರಿಗಳು ಈ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚನೆ ನೀಡಬೇಕು ಎಂದು ಸ್ವತಃ ಅಡಕೆ ಬೆಳೆಗಾರರಾಗಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Leave A Reply

Your email address will not be published.