ದ.ಕ.ಜಿಲ್ಲೆಯ ಈ ಮನಮೋಹಕ ಸ್ಥಳದ ಚಿತ್ರ ನೋಡಿ ಪರವಶರಾಗಿ “ಫೋಟೋದೊಳಗೆ ಧುಮುಕಬೇಕೆನಿಸುತ್ತಿದೆ” ಎಂದ ಆನಂದ್ ಮಹೀಂದ್ರಾ!
ಪ್ರಕೃತಿ, ಪ್ರಕೃತಿ ಮಡಿಲು ಯಾರಿಗೆ ತಾನೇ ಇಷ್ಟ ಇಲ್ಲ
ಹೇಳಿ? ಎಲ್ಲರೂ ಇಷ್ಟ ಪಡುತ್ತಾರೆ. ಪ್ರಕೃತಿಯಿಂದನೇ ಮಿಂದೇಳುವ ಸ್ಥಳಗಳು ಪ್ರತಿನಿತ್ಯ ಕಂಡರೆ ಮನಸ್ಸು ಧನ್ಯೋಸ್ಮಿ ಅನ್ನುವುದಂತೂ ಖಂಡಿತ. ಅದರಲ್ಲೂ ದಕ್ಷಿಣಕನ್ನಡದ ನದಿ, ಗಿರಿ ಶಿಖರಗಳ ಕೊರಕಲು, ಅಡಿಕೆ ತೋಟದ ಶ್ರೀಮಂತಿಕೆ, ಹಸುರು ನಿಭಿಡ ಕಾಡುಗಳ ಆಕರ್ಷಣೆ, ಅಹಾರಾದ ವೈವಿದ್ಯತೆ, ಜನಸಾಮಾನ್ಯರ ಸೌಮ್ಯತೆ ಮತ್ತು ಸರಿಯಾದ ಕಾರಣಕ್ಕೆ ಜಗತ್ತಿಗೇ ಸೆಡ್ಡು ಹೊಡೆದು ನಿಲ್ಲಬಲ್ಲ ಕಠೋರತೆ ಎಲ್ಲದರ ಪ್ಯಾಕೆಜ್ ದಕ್ಷಿಣ ಕನ್ನಡ. ಈಗ ಇಲ್ಲಿನ ಪ್ರಕೃತಿ ಸ್ಥಳಕ್ಕೆ ಮಹೀಂದ್ರಾ ಗ್ರೂಪ್ ನ ಮುಖ್ಯಸ್ಥ ಪರವಶರಾಗಿದ್ದಾರೆ. ಅದು ಕೂಡಾ ದ.ಕ.ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾಡಿನ ಮಧ್ಯೆ ಸಾಗುವ ರಸ್ತೆ ಚಿತ್ರಕ್ಕೆ !
ಹೌದು ಈ ಚಿತ್ರ ಅಷ್ಟೊಂದು ಮನೋಹರವಾಗಿದೆ. ಅಷ್ಟು ಮಾತ್ರವಲ್ಲ ಸ್ಥಳ ಕೂಡಾ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಗುಂಡ್ಯ ನಡುವೆ ಪಶ್ಚಿಮ ಘಟ್ಟದ ಕಾಡಿನೊಳಗೆ ಸಾಗುವ ಹೆದ್ದಾರಿ ಚಿತ್ರ ಇದಾಗಿದ್ದು ಮಹೀಂದ್ರಾ ಗ್ರೂಪ್ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು “ಫೋಟೊದೊಳಗೆ ಧುಮುಕಬೇಕೆನಿಸುತ್ತಿದೆ” ಎಂದಿದ್ದಾರೆ.
‘ವಿಸಿಟ್ ಉಡುಪಿ’ ಎಂಬ ಟ್ವಿಟರ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾಡಿನ ಮಧ್ಯೆ ಸಾಗುವ ರಸ್ತೆ ಚಿತ್ರವನ್ನು ಪ್ರಕಟಿಸಲಾಗಿತ್ತು. ಇದಕ್ಕೆ ‘ವಿಶ್ವದ ಅತ್ಯಂತ ಸುಂದರವಾದ ಕಾಡಿನ ಪ್ರಯಾಣ’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಟ್ವೀಟ್ ಅನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
‘ಸುಂದರವಾಗಿದೆ. ಫೋಟೋದೊಳಗೆ ಧುಮುಕಬೇಕು ಎಂದೆನಿಸುತ್ತಿದೆ’ ಎಂದು ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.
ಅಚ್ಚುಕಟ್ಟಾಗಿರುವ ಟಾರಿನ ರಸ್ತೆ, ಅಂಚಿಗಿರುವ ಎರಡು ಬಿಳಿಯ ಪಟ್ಟೆಗಳು, ರಸ್ತೆಯ ಎರಡೂ ಬದಿಗಳಲ್ಲಿ ದಟ್ಟ ಹಸಿರಿನ ಕಾಡು, ಕಣ್ಮನ ಸೆಳೆಯುವ ನೋಟ ಚಿತ್ರದಲ್ಲಿ ಸೆರೆಯಾಗಿದೆ. ದೀಪಕ್ ಎಂಬುವವರು ಕ್ಲಿಕ್ಕಿಸಿರುವ ಈ ಫೋಟೊಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.