SSLC ಪರೀಕ್ಷೇಲಿ ಡಿಸ್ಟಿಂಕ್ಷನ್ ತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆ!!!
ಪರೀಕ್ಷೆಯಲ್ಲಿ ಫೇಲ್ ಆಗ್ತೀನೇ ಅಂತ ಭಯದಿಂದಲೇ ಎಷ್ಟೋ ಮಂದಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗೋದನ್ನು ನೋಡ್ತೀವಿ. ಅಂಥಹ ಹಲವಾರು ಮಕ್ಕಳಿಗೆ ಧೈರ್ಯ ತುಂಬಿ ಜೀವನದಲ್ಲಿ ಕಲಿಯಲು ತುಂಬಾ ಅವಕಾಶಗಳಿವೆ ಎಂಬ ಸಾಂತ್ವನದ ಮಾತುಗಳನ್ನಾಡಿದರೆ, ಸೋತ ಮಕ್ಕಳು ಮತ್ತೆ ಗೆದ್ದು ಬರುವ ಎಲ್ಲಾ ಭರವಸೆಗಳು ಖಂಡಿತಾ ಇದೆ. ಹಾಗೆನೇ ಹೆದರಿಕೆಯಿಂದನೋ, ಮರ್ಯಾದೆ ಅಂಜಿಯೋ ಕೆಲವೊಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಾರೆ. ಅಂತಹ ಒಂದು ಪ್ರತಿಭಾವಂತ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದಲ್ಲಿ ನಡೆದಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಷಯಗಳಲ್ಲಿ ಎ + ಮಾರ್ಕ್ಸ್ ತೆಗೆದುಕೊಂಡಿದ್ದ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿನಿಯೋರ್ವಳು ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕೇರಳದ ಕುನ್ನಿಕ್ಕೋಡ್ನಲ್ಲಿ ನಡೆದಿದೆ.
ಸಾನಿಗಾ (17) ಮೃತ ಹುಡುಗಿ. ಈಕೆ ಥಲವೂರ್ ಮೂಲದ ಸನಲ್ ಕುಮಾರ್ ಮತ್ತು ಅನಿತಾ ದಂಪತಿಯ ಪುತ್ರಿ. ಅನಿತಾ ಮನ್ನಾರ್ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಥಲವೂರ್ಗೆ ಬರುತ್ತಾರೆ. ಸನಲ್ ಕಾರ್ಪೆಂಟರ್ ಆಗಿದ್ದು, ಮನೆಗೆ ಬರುವುದು ರಾತ್ರಿ 8 ಗಂಟೆಯಾಗುತ್ತದೆ.
ಎಂದಿನಂತೆಯೇ ಬುಧವಾರ ರಾತ್ರಿ ಅನಿತಾ, ತಮ್ಮ ಮಗಳಿಗೆ ಎಷ್ಟು ಬಾರಿ ಕರೆ ಮಾಡಿದರೂ, ಆಕೆ ಸ್ವೀಕರಿಸದಿದ್ದಾಗ, ನೆರೆಮನೆಯವರಿಗೆ ಫೋನಾಯಿಸಿದ್ದಾರೆ. ನೆರೆ ಮನೆಯವರು ಅನಿತಾ ಅವರ ಮನೆಯ ಬಳಿ ಬಂದಾಗ ಬಾಗಿಲು ಲಾಕ್ ಆಗಿರುವುದು ತಿಳಿಯುತ್ತದೆ. ಬಳಿಕ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ಸಾನಿಗಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಡ್ರೂಮ್ನಲ್ಲಿ ಪತ್ತೆಯಾಗಿದ್ದಾಳೆ.
ಮನೆಯಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದ್ದು, ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾನಿಗಾ ಉಲ್ಲೇಖಿಸಿದ್ದಾಳೆ. ಕೇರಳದಲ್ಲಿ ಇಂದು ಪ್ರಥಮ ಪಿಯುಸಿಯ ಮಾದರಿ ಪರೀಕ್ಷೆ ಆರಂಭವಾಗಿದ್ದು, ಜೂನ್ 13ರಂದು ವಾರ್ಷಿಕ ಪರೀಕ್ಷೆ ಶುರುವಾಗಲಿದೆ. ಆದರೆ, ಪರೀಕ್ಷೆ ಎದುರಿಸುವ ಬದಲು ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತದ ಸಂಗತಿಯಾಗಿದೆ.