ಮತ್ತೊಮ್ಮೆ ಮೊಳಗಿದ ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಅಮೆರಿಕ !! | ಆಗಂತುಕನಿಂದ ಮನಬಂದಂತೆ ಗುಂಡಿನ ದಾಳಿ, ಐವರು ಸಾವು
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಬಂದೂಕು ಹಿಡಿದು ಬಂದ ಆಗಂತುಕನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಆಸ್ಪತ್ರೆ ಆವರಣದಲ್ಲಿ ನಡೆದ ಈ ಸಾಮೂಹಿಕ ಗುಂಡಿನ ದಾಳಿಗೆ ಐವರು ಸಾವನ್ನಪ್ಪಿದ್ದಾರೆ.
ಓಕ್ಲಹೋಮಾದ ಟಲ್ಸಾದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಗುಂಡಿನ ದಾಳಿ ಬಳಿಕ ದಾಳಿಕೋರ ಸಹ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆ ಕಟ್ಟಡದ 2ನೇ ಮಹಡಿಯಲ್ಲಿ ವ್ಯಕ್ತಿಯೊಬ್ಬ ಬಂದೂಕು ಹಿಡಿದಿರುವ ಬಗ್ಗೆ ನಮಗೆ ಕರೆ ಬಂದಿತ್ತು. ನಾವು ಸ್ಥಳಕ್ಕೆ ಬರುವಷ್ಟರಲ್ಲಿ ಆತ ಅನೇಕರ ಮೇಲೆ ಗುಂಡಿನ ದಾಳಿ ನಡೆಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಹಂತಕನ ಬಳಿ ದೊಡ್ಡದಾದ ರೈಫಲ್ ಮತ್ತು ಪಿಸ್ತೂಲ್ ಇತ್ತು. ಆತ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಮೇ ತಿಂಗಳಿನಲ್ಲಿ ಅಮೆರಿಕದಲ್ಲಿ ನಡೆದ 2 ಬಾರಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಕಳೆದ ವಾರವಷ್ಟೇ ಟೆಕ್ಸಾಸ್‍ನಲ್ಲಿ ಬಂದೂಕುಧಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದ. ನ್ಯೂಯಾರ್ಕ್ ನ ಸೂಪರ್ ಮಾರ್ಕೆಟ್‍ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆ ಮಾಡಿದ್ದ. ಪದೇ ಪದೇ ಗುಂಡಿನ ದಾಳಿ ನಡೆಯುತ್ತಿರುವುದು ಅಮೆರಿಕದಲ್ಲಿ ಆತಂಕ ಹುಟ್ಟಿಸಿದೆ.
ಮತ್ತೊಂದೆಡೆ ಶ್ವೇತಭವನವೂ ಈ ಘಟನೆಯ ಮೇಲೆ ಕಣ್ಣಿಟ್ಟಿದೆ. ಟಲ್ಸಾದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುಂಡಿನ ದಾಳಿಯ ಬಗ್ಗೆ ಅಧ್ಯಕ್ಷರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜೋ ಬಿಡೆನ್ ಇತ್ತೀಚೆಗೆ ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರನ್ನು ಅಮೆರಿಕದಲ್ಲಿ ಹಿಂಸಾಚಾರವನ್ನು ಎದುರಿಸಲು ಸಲಹೆ ಕೇಳಿದ್ದರು.