ಮಂಗಳೂರು : ಎಸ್ ಎಸ್ ಎಲ್ ಸಿ ಬಾಲಕಿಯ ಕಿಡ್ನಿ ವೈಫಲ್ಯ; ಬೆಂಗಳೂರಿಗೆ ಒಯ್ಯುತ್ತಿದ್ದ ವೇಳೆ ನೆಲ್ಯಾಡಿಯಲ್ಲಿ ಸಾವು !
ಮಂಗಳೂರು : ಎರಡೂ ಕಿಡ್ನಿ ವಿಫಲಗೊಂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಒಯ್ಯಲಾಗುತ್ತಿದ್ದ ಸಂದರ್ಭ ಆರೋಗ್ಯ ಹದಗೆಟ್ಟು ಸಾವಿಗೀಡಾದ ಘಟನೆಯೊಂದು ನಡೆದಿದೆ. ಸೇವಂತಿಗುಡ್ಡೆಯ ತೇಜಸ್ವಿನಿ(15) ಎಂಬಾಕೆಯೇ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ನೆಲ್ಯಾಡಿಯಲ್ಲಿ ಸಾವನ್ನಪ್ಪಿದ್ದಾಳೆ.
ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಪರಿಸರದಲ್ಲಿ ವಾಸವಾಗಿರುವ ರಮೇಶ್ ನಾಯ್ಕ ಹಾಗೂ ರೇವತಿ ದಂಪತಿಯ ಹಿರಿಯ ಮಗಳಾದ ತೇಜಸ್ವಿನಿಯ ಎರಡೂ ಕಿಡ್ನಿಗಳು ವೈಫಲ್ಯಕ್ಕೊಳಗಾಗಿದ್ದು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ತೇಜಸ್ವಿನಿಗೆ ಡಯಾಲಿಸಿಸ್ ಚಿಕಿತ್ಸೆ ನಡೆಸಲಾಗುತ್ತಿದ್ದು ಆಕೆಗೆ ಬೇರೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರಂತೆ.
ತೀರಾ ಅಶಕ್ತರಾಗಿದ್ದ ಕುಟುಂಬವು ಮಗಳ ಚಿಕಿತ್ಸೆಗಾಗಿ
ದಾನಿಗಳಲ್ಲಿ ನೆರವು ಯಾಚಿಸಿತ್ತು. ಕೆಲವು ಹೃದಯ
ವೈಶಾಲಿಗಳು ತೇಜಸ್ವಿನಿ ಚಿಕಿತ್ಸೆಗೆ ಸಹಕರಿಸಿದ್ದರು.
ಹಾಗಾಗಿ ಇಂದು ತೇಜಸ್ವಿನಿಯನ್ನ ಹೆಚ್ಚಿನ ಚಿಕಿತ್ಸೆಗೆ
ಅಂಬುಲೆನ್ಸಲ್ಲಿ ಬೆಂಗಳೂರಿಗೆ ಒಯ್ಯುತ್ತಿದ್ದಾಗ ತೀವ್ರ
ಉಸಿರಾಟದ ಸಮಸ್ಯೆ ಉಂಟಾಗಿದ್ದು, ದಾರಿ ಮಧ್ಯದ
ನೆಲ್ಯಾಡಿಯ ಸ್ಥಳೀಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ
ನೀಡಲಾಗಿದೆ. ಮಧ್ಯಾಹ್ನದ ವೇಳೆ ತೇಜಸ್ವಿನಿ ಚಿಕಿತ್ಸೆ
ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.