ರಾಜ್ಯವೇ ಬೆಚ್ಚಿದ್ದ ರೂಪದರ್ಶಿಯ ಬರ್ಬರ ಕೊಲೆ!! ಅಂದೇ ರಾತ್ರಿ ಮೃತದೇಹ ಶವಾಗಾರಕ್ಕೆ ಸಾಗಿಸಿದ್ದ ಸಿಬ್ಬಂದಿಯ ದುರಂತ ಅಂತ್ಯ!!
ಬೆಂಗಳೂರು:ಅದು 2003 ರ ಜುಲೈ 26. ಮುಂಜಾನೆಯಿಂದ ಪ್ರಶಾಂತವಾಗಿದ್ದ ನಗರ ಸಂಜೆ ವೇಳೆಗಾಗಲೇ ಅರೆಕ್ಷಣ ಬೆಚ್ಚಿಬಿದ್ದಿತ್ತು. ಬಹುದೊಡ್ಡ ಅಪಾರ್ಟ್ಮೆಂಟ್ ಒಂದರಿಂದ ಆಗತಾನೆ ಶಾಲೆ ಬಿಟ್ಟು ಬಂದಿದ್ದ ಪುಟ್ಟ ಮಕ್ಕಳಿಬ್ಬರ ಕೂಗು, ಏನಾಯಿತೆಂದು ನೋಡುವ ವೇಳೆಗಾಗಲೇ ಅಲ್ಲೊಬ್ಬ ರೂಪಸುಂದರಿಯ ಹೆಣ ಮಕಾಡೆ ಮಲಗಿತ್ತು. ಸಾವಿನ ಸುದ್ದಿಯು ಪೊಲೀಸರಿಗೆ ಮುಟ್ಟಿ ಅದಾಗಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಾದರೂ ಕೊಲೆಯೋ ಆತ್ಮಹತ್ಯೆಯೋ ಎನ್ನುವುದು ತಿಳಿಯುವ ವೇಳೆಗೆ ಕೊಂಚ ತಡವಾಗಿತ್ತು.
ಹೌದು,2003 ರ ಜುಲೈ 26ರ ಇಳಿ ಸಂಜೆಯ ಹೊತ್ತಿಗೆ ಬೆಳಕಿಗೆ ಬಂದ ಆ ಒಂದು ಕೊಲೆ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡಿತ್ತು. ಹೊರರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ರೂಪದರ್ಶಿ ಆಶೀಮ್ ಹೊರಾ ಎನ್ನುವ ಮಹಿಳೆಯೊಬ್ಬರನ್ನು ಹಾಡಹಗಲೇ ಅವರು ನೆಲೆಸಿದ್ದ ಅಪಾರ್ಟ್ಮೆಂಟ್ ನಲ್ಲಿಯೇ ಬರ್ಬರವಾಗಿ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು.
ಆಕೆ ತನ್ನಿಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆ ಕೆಲಸ ಮಾಡಿಕೊಂಡಿದ್ದ ವೇಳೆ ಮನೆಯ ಟಿವಿ ರಿಪೇರ್ ಮಾಡುವ ಹಿನ್ನೆಲೆಯಲ್ಲಿ ಯುವಕನೊಬ್ಬ ಬಂದಿದ್ದು, ಬಂದಾತನೇ ಆಕೆಯ ಅರೆ-ಬರೆ ಬಟ್ಟೆಯ ಮೈಯ್ಯನ್ನು ನೋಡಿ ಆಕೆಯನ್ನು ಅತ್ಯಾಚಾರ ಎಸಗಲು ಮುಂದಾಗಿದ್ದು, ಇದನ್ನು ವಿರೋಧಿಸಿದಾಗ ಅಲ್ಲೇ ಪಕ್ಕದ ಅಡುಗೆ ಕೊನೆಯಲ್ಲಿದ್ದ ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ ಪರಾರಿಯಾಗಿದ್ದ.
ಸಂಜೆವೇಳೆಗೆ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಜೀವನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ಕಾರ್ಯ ಮುಗಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆರೋಪಿಯ ಪತ್ತೆ ಹೇಗಾಯಿತು?
ಸುಮಾರು 60 ಮಂದಿ ಸೆಕ್ಯೂರಿಟಿ ಗಾರ್ಡ್ ಗಳಿರುವ ಅಪಾರ್ಟ್ ಮೆಂಟ್ ಗೆ ತೆರಳಿದ್ದ ಆರೋಪಿ ಒಳ ಹೋಗುವಾಗ ಗೇಟ್ ನಲ್ಲಿ ಎಂಟ್ರಿ ಹಾಕಿ ಹೋಗಿದ್ದು, ಕೃತ್ಯ ಎಸಗಿ ಹಿಂದಿರುಗುವಾಗ ಮಹಿಳೆಯ ಮನೆ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಹಿಂಬದಿ ಬಾಗಿಲಿನಿಂದ ಹೊರ ಹೋಗಿದ್ದ. ಪೊಲೀಸರು ಕೃತ್ಯ ಎಸಗಿದ ಆರೋಪಿಯ ಪತ್ತೆಗೆ ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡರಾದರೂ ಕೆಲ ಸಮಯಗಳ ವರೆಗೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಕಂಡಿರಲಿಲ್ಲ.
ಹೇಗಾದರೂ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಬೇಕು ಎಂದು ನಿದ್ದೆ ಬಿಟ್ಟು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಮುಂಜಾನೆ ವೇಳೆಗಾಗಲೇ ಆರೋಪಿಯ ಬಗ್ಗೆ ಕೆಲ ಮಾಹಿತಿ ದೊರಕಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ನೆಲೆಸಿದ್ದ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂದು ಠಾಣೆಯಲ್ಲಿ ಕೂರಿಸಿದ್ದರು. ವಿಚಾರಣೆಯ ಬಳಿಕ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ರೂಪದರ್ಶಿಯ ಕೊಲೆ ಆರೋಪಿಯ ಬಂಧನ ಎನ್ನುವ ವಿಚಾರ ಮಾರನೆಯ ದಿನ ಪತ್ರಿಕೆಗಳ ಮುಖಪುಟದಲ್ಲಿ ಬಹಳ ದೊಡ್ಡದಾಗಿ ಪ್ರಕಟಗೊಂಡಿದ್ದು, ಬೆಂಗಳೂರು ಪೊಲೀಸರ ಕಾರ್ಯವೈಖರಿ ಕಂಡು ನಗರದ ಜನತೆಗೆ ಧೈರ್ಯ ತುಂಬಿತ್ತು.
ರೂಪದರ್ಶಿಯ ಶವ ಎತ್ತಿದ್ದ ಸಿಬ್ಬಂದಿ ಕೆಲ ಹೊತ್ತಿನಲ್ಲೇ ಸಾವು!
ಹೌದು. ರೂಪದರ್ಶಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಘಟನಾ ಸ್ಥಳದಿಂದ ಎತ್ತಿ ಆಂಬುಲೆನ್ಸ್ ಗೆ ತುಂಬಿಸಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದ ಪೊಲೀಸ್ ಸಿಬ್ಬಂದಿಯೋರ್ವರು ಮುಂಜಾನೆ ವೇಳೆಗಾಗಲೇ ಭೀಕರ ಅಪಘಾತವೊಂದರಲ್ಲಿ ಮೃತಪಟ್ಟ ಸುದ್ದಿ ತಿಳಿದು ಪೊಲೀಸ್ ಇಲಾಖೆಗೆ ಒಂದು ಕ್ಷಣ ಸಿಡಿಲುಬಡಿದಂತಾಗಿತ್ತು. ರೂಪದರ್ಶಿ ಮಹಿಳೆಯ ಶವ ಆಸ್ಪತ್ರೆಗೆ ಸಾಗಿಸಿ,ಇನ್ನೊಂದು ಕೇಸಿನ ವಿಚಾರವಾಗಿ ರಾತ್ರೋ ರಾತ್ರಿ ಕಾರ್ಯಾಚರಣೆಗೆ ತೆರಳಿದ್ದ ಮೂವರು ಸಿಬ್ಬಂದಿಗಳಿದ್ದ ಆಟೋ ರಿಕ್ಷಾವೊಂದು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟರು.
ಗಾಯಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ,ಆ ಹೊತ್ತಿಗೆ ಸಿಬ್ಬಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಒಂದೇ ಶವಗಾರದಲ್ಲಿ ಇಬ್ಬರ ಶವ ಇಟ್ಟು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಅದೇ ಮೊದಲ ಬಾರಿಗೆ ಬೆಳಕಿಗೆ ಬಂದದ್ದಾದರೂ, ಕೊಲೆ ಆರೋಪಿಯನ್ನು ಬಂಧಿಸಿದ ಖುಷಿಯಲ್ಲಿದ್ದ ಪೊಲೀಸರಲ್ಲಿ ಓರ್ವ ಸಿಬ್ಬಂದಿಯನ್ನು ಕಳೆದುಕೊಂಡ ಶೋಕ ಮಡುಗಟ್ಟಿತ್ತು.
ಇನ್ನೊಂದು ಸಂಚಿಕೆಯಲ್ಲಿ ಮುಂದುವರಿಯುವುದು…